01/08/2024
ಶಿಕ್ಷಣ ಶಿಲ್ಪಿ ಡಾ. ಪ್ರಭಾಕರ ಕೋರೆ
ನಮಸ್ಕಾರ ವೀಕ್ಷಕರೆ
ನಾನು ರಾಜು ಉಸ್ತಾದ್
"ನೇರ ಹೊಡೆತ" ಹೆಸರಿನ
ಸಮೂಹ ಜಾಲತಾಣಕ್ಕೆ ನಿಮಗೆ ಸ್ವಾಗತ.
ನಾನೀಗ ಶಿಕ್ಷಣ, ಸಹಕಾರ, ಕೃಷಿ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಆಕಾಶದಷ್ಟು ಅವಕಾಶಗಳನ್ನು ತೆರೆದಿಟ್ಟ ಹಾಗೂ ಲಕ್ಷಾಂತರ ಜನರಿಗೆ ಜೀವನ ರೂಪಿಸಿಕೊಳ್ಳಲು ವೇದಿಕೆ ಕಲ್ಪಿಸಿ, ಕರ್ನಾಟಕದ ಹೆಸರು ದೇಶ ಮತ್ತು ವಿದೇಶಗಳಲ್ಲಿ ರಿಂಗುಣಿಸುವಂತೆ ಮಾಡಿದ ದೂರದೃಷ್ಟಿಯ ಧೀಮಂತ ನಾಯಕ ಡಾ. ಪ್ರಭಾಕರ ಕೋರೆ ಅವರ ಬಗ್ಗೆ ಮಾತನಾಡುತ್ತಿದ್ದೇನೆ.
ಸಾಮಾನ್ಯವಾಗಿ ನಾವು ಉನ್ನತ ಶಿಕ್ಷಣ ಹಾಗೂ ಅದರ ಗುಣಮಟ್ಟ ಇಲ್ಲವೆ ಗುಣಾತ್ಮಕತೆಯ ಬಗ್ಗೆ ಮಾತನಾಡುವಾಗ, ಇಂಗ್ಲಂಡ್ ದ ಕೇಂಬ್ರಿಡ್ಜ್, ಆಕ್ಸ್‌ಫರ್ಡ್ ಮತ್ತು ಅಮೇರಿಕದ ಹಾರ್ವರ್ಡ್ ವಿಶ್ವವಿದ್ಯಾಲಯಗಳ ನೆನಪು ಮಾಡಿಕೊಳ್ಳುತ್ತೇವೆ. ಅದೇ ಪ್ರಚಲಿತ ಭಾರತದ ವಿಷಯ ಬಂದಾಗ, ಶಿಕ್ಷಣ ಆಕಾಂಕ್ಷಿಗಳ ಹಾಗೂ ಶಿಕ್ಷಣ ತಜ್ಞರ ಸ್ಮೃತಿ ಪಟಲದ ಮೇಲೆ ಬೆಳಗಾವಿಯ "ಕೆಎಲ್ ಇ" ಸಂಸ್ಥೆಯ ಹೆಸರು ಸುಳಿದು ಹೋಗುತ್ತದೆ. ಆ ಎತ್ತರಕ್ಕೆ ಈ ಸಂಸ್ಥೆ ಈಗ ಬೆಳೆದು ನಿಂತಿದೆ. ಇದರ ಶ್ರೇಯಸ್ಸು ಕಳೆದ 40 ವರ್ಷಗಳಿಂದ ಆ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಇದಿಷ್ಟೂ ಅವಧಿಗೆ ಇವರ ಅವಿರೋಧ ಆಯ್ಕೆ ನಡೆದಿರುವುದು ಇತಿಹಾಸ. ಇದಕ್ಕೆ ಸಹಕರಿಸಿದ ಸಂಸ್ಥೆಯ ಅಧ್ಯಕ್ಷ ಮತ್ತು ನಿರ್ದೇಶಕರುಗಳ ನಡೆ ಸ್ಮರಣೀಯ. ಸಿಬ್ಬಂದಿಗಳ ಅರ್ಪಣಾ ಸೇವಾಭಾವವೂ ಮೆಚ್ಚುವಂಥದ್ದು.
ನನಗಿಲ್ಲಿ ದೃಷ್ಟಾಂತವೊಂದರ ನೆನಪಾಗುತ್ತಿದೆ. ಎಲ್ಲರೂ ಅರಿತಿರುವಂತೆ ವಿಜಯನಗರ ಸಾಮ್ರಾಜ್ಯ ಭಾರತೀಯ ಇತಿಹಾಸದಲ್ಲಿ ಅಮರವಾದದ್ದು. ಇದನ್ನು "ಹಕ್ಕ-ಬುಕ್ಕ" ಎಂಬ ಸಹೋದರರು ಸ್ಥಾಪಿಸಿದರು. ಸಂಗಮ, ಸಾಳ್ವ, ತುಳುವ ಮತ್ತು ಅರವೀಡು ಹೆಸರಿನ ಒಟ್ಟು ನಾಲ್ಕು ರಾಜ ವಂಶಗಳು ಆಳಿದವು. ಆದರೆ ಅದು ಪ್ರವರ್ಧಮಾನದ ತುತ್ತತುದಿಗೆ ಎರಿದ್ದು, ತುಳುವ ವಂಶದ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ.
ಹಾಗೆಯೇ ಇಲ್ಲಿ ಸಪ್ತರ್ಷಿಗಳು 1916 ರಲ್ಲಿ ಕೆಎಲ್ ಇ ಸಂಸ್ಥೆ ಸ್ಥಾಪಿಸಿದರು. ಕೊಡುಗೈ ದಾನಿಗಳು ಅವರ ಕೈ ಬಲಪಡಿಸಿದರು. ಮುಂದೆ ಬಂದವರು ಸಂಸ್ಥೆಯ ಬೇರುಗಳನ್ನು ಹಿಡಿದಿಟ್ಟರು. ಡಾ. ಪ್ರಭಾಕರ ಕೋರೆಯವರು ಚುಕ್ಕಾಣಿ ಹಿಡಿದ ನಂತರ ಶಿಕ್ಷಣ ಸಾಮ್ರಾಜ್ಯದ ವಿಸ್ತರಣೆಯ ದಂಡಯಾತ್ರೆ ಆರಂಭಗೊಂಡಿತು. ಅವರ ಅಶ್ವಮೇಧ ಕುದುರೆಯ ಓಟ ಇನ್ನು ನಿಂತಿಲ್ಲ. ಅದು ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಜಿಗಿದು ಹೊಸ ಶಾಖೆಗಳ ಸ್ಥಾಪನೆ ನಡೆಸಿದೆ. ಈ ನಡುವೆ ಸಂಸ್ಥೆ ತನ್ನ ವಯಸ್ಸಿನ ಸೆಂಚ್ಯುರಿ ಬಾರಿಸಿ, ಅದರ ಮೇಲೆ ಎಂಟು ರನ್ ತೆಗೆದಿದೆ. ಸ್ವತಃ ಪ್ರಭಾಕರ ಕೋರೆಯವರೂ 2024, ಆಗಸ್ಟ್ 1ಕ್ಕೆ ತಮ್ಮ ವಯಸ್ಸಿನ 77 ವರ್ಷ ಪೂರ್ಣ ಗೊಳಿಸಿ, ಸಹಸ್ರ ಚಂದ್ರದರ್ಶನದ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಈಗಲೂ ದಣಿವರಿಯದೆ ದುಡಿಯುತ್ತಿದ್ದಾರೆ. ಯುವಕನ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಇವರನ್ನು ಸಂಸ್ಥೆಯ ಅಷ್ಟಮ ಋಷಿ ಎಂತಲೂ ಕರೆಯುತ್ತಾರೆ.
ಆಗ 37ರ ಪ್ರಾಯದ ಕೋರೆ
1984 ರಲ್ಲಿ "ಕೆಎಲ್ ಇ" ಕಾರ್ಯಾಧ್ಯಕ್ಷ ಗದ್ದುಗೆ ಏರಿದಾಗ ಸಂಸ್ಥೆಯ ಅಂಗಸಂಸ್ಥೆಗಳ ಸಂಖ್ಯೆ ಕೇವಲ 38 ರಷ್ಟಿತ್ತು. ಈಗ ಅದರ ಸಂಖ್ಯೆ 310ಕ್ಕೆ ಏರಿದೆ. ಆಗ ವಾರ್ಷಿಕ ಬಜೆಟ್ 9 ಕೋಟಿ ರೂ.ಗಳ ಸಮೀಪವಿತ್ತು. ಈಗ 3,000 ಕೋಟಿ ರೂ. ದಾಟಿದೆ.
ಸಂಸ್ಥೆಯಲ್ಲಿ ವೃತ್ತಿಪರ ಕೋರ್ಸ, ಶಾಲಾ-ಕಾಲೇಜು, ಸಂಗೀತ, ರೇಡಿಯೋ ಕೇಂದ್ರ, ಕೃಷಿ ತರಬೇತಿ, ವಿಜ್ಞಾನ, ದಂತ, ಆರೈಕೆ, ಸಂಶೋಧನೆಗಳಿಂದ ಹಿಡಿದು, ಆರೋಗ್ಯ ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳು ಇವೆ. 1,40,000 ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. 18 ಸಾವಿರ ಸಿಬ್ಬಂದಿಗಳು ಇದ್ದಾರೆ.
"ಯುಎಸ್ ಎಂ-ಕೆಎಲ್ ಇ" ಅಂತಾರಾಷ್ಟ್ರೀಯ ವೈದ್ಯಕೀಯ ಕಾರ್ಯಕ್ರಮದಡಿ, ಮಲೇಷ್ಯಾ ದೇಶದ "ಯೂನಿವರ್ಸಿಟಿ ಸ್ಯಾನ್ಸ್" ನ ವಿದ್ಯಾರ್ಥಿಗಳಿಗೆ ಬೆಳಗಾವಿಯ ಕೆಎಲ್ ಇ ಕ್ಯಾಂಪಸ್ ನಲ್ಲಿ ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಸುಸಜ್ಜಿತ ಮಹಾವಿದ್ಯಾಲಯದ ನಿರ್ಮಾಣ ಮಾಡಲಾಗಿದೆ.
ಕೆಎಲ್ ಇ ಸಂಸ್ಥೆಯ ಸೇವಾಕಾರ್ಯ ನಗರ ಮತ್ತು ಪಟ್ಟಣ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಅದು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿಕೊಂಡಿದೆ. ಗ್ರಾಮೀಣದಿಂದ ಹೆಚ್ಚು ಆದಾಯ ಬರದಿದ್ದರೂ ಇಲ್ಲಿ ಶೇ. 50 ರಷ್ಟು ಸಂಸ್ಥೆಗಳನ್ನು ನಡೆಸುತ್ತಿದೆ.
ಕೆಎಲ್ ಇ ಸಂಸ್ಥೆಗಳು ಜ್ಞಾನ ವಿನಿಮಯ ಮತ್ತು ಕುಶಲತೆ ಹೆಚ್ಚಿಸಿಕೊಳ್ಳಲು ಜಾಗತಿಕ ಮಟ್ಟದ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ, ಒಡಂಬಡಿಕೆ, ಒಪ್ಪಂದ
ಮಾಡಿಕೊಂಡಿವೆ. ವಿಶ್ವ ದರ್ಜೆಯ ಪ್ರಯೋಗಾಲಯ, ಕ್ರೀಡಾ ಸೌಕರ್ಯಗಳನ್ನು ಹೊಂದಿವೆ.
ಸಂಸ್ಥೆ ಬೆಳೆಸಲು ಮತ್ತು ಅದನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಡಾ. ಪ್ರಭಾಕರ ಕೋರೆ ಅವರು ಬಹು ಆಯಾಮದಲ್ಲಿ ಕ್ರಮಕೈಗೊಂಡಿದ್ದಾರೆ. ತಮಗಿರುವ ರಾಜಕೀಯ ಮತ್ತು ಸಾಮಾಜಿಕ ಪ್ರಭಾವ, ಸಂಪರ್ಕಗಳನ್ನು ಬಳಸಿಕೊಂಡಿದ್ದಾರೆ. ಅದರ ಫಲ ಇಡೀ ಸಮಾಜಕ್ಕೆ ಸಿಗುತ್ತಿದೆ.
ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಹೆಸರಾಂತರು, ಆಧ್ಯಾತ್ಮೀಕ ಗುರುಗಳು, ಕೈಗಾರಿಕೋದ್ಯಮಿಗಳು, ವಿಜ್ಞಾನಿಗಳು ಸಂಸ್ಥೆಯ ಕೇಂದ್ರ ಸ್ಥಾನ ಸೇರಿ ಅಂಗ ಸಂಸ್ಥೆಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.
ರಾಜಕೀಯ ದಿಗ್ಗಜರ ಸಂಖ್ಯೆಗೂ ಕಡಿಮೆ ಇಲ್ಲ. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರುಗಳು, ನಾನಾ ರಾಜ್ಯಗಳ ರಾಜ್ಯಪಾಲರುಗಳು, ಮುಖ್ಯಮಂತ್ರಿಗಳು ಭೇಟಿ ನೀಡಿ ಸಾಧನೆಯ ಬಗ್ಗೆ ಬೆರಗು ವ್ಯಕ್ತಪಡಿಸಿ ಬೆಂಬಲಿಸಿದ್ದಾರೆ.
ಈಗ ಹೇಳಿ... ದಿಟ್ಟ ನಿರ್ಧಾರದ
ಈ ಶಿಖರಸಾಧಕ ನಾಯಕ ಡಾ. ಪ್ರಭಾಕರ ಕೋರೆ
ವಿಜಯನಗರ ಸಾಮ್ರಾಜ್ಯದ
ಶ್ರೀಕೃಷ್ಣ ದೇವರಾಯನಲ್ಲವೆ?!
ನೀವು ಏನೇ ಹೇಳಿ. ನನ್ನ ಪರಿಕಲ್ಪನೆ ಮತ್ತು ಅಭಿಪ್ರಾಯ ಹೀಗಿದೆಯಷ್ಟೆ...
ಡಾ. ಪ್ರಭಾಕರ ಕೋರೆ ಹುಟ್ಟಿದ್ದು, ಅದೊಂದು ಅಮೃತ ಗಳಿಗೆ. ದೇಶ ದಾಶ್ಯದ ಸಂಕೋಲೆಯಿಂದ ಮುಕ್ತವಾಗಲಿತ್ತು. ಸ್ವಾತಂತ್ರ್ಯೋದಯದ ಹೊಂಗಿರಣಗಳು ಪೂರ್ವ ದಿಕ್ಕಿನ ಬಾನಿನಂಚಿನ ಮಬ್ಬುಗತ್ತಲೆಯಿಂದ ಹೊರಬಿದ್ದಿದ್ದವು. ಅವುಗಳ ಹೊಳಪು ಸಮಗ್ರ ದೇಶವಾಸಿಗಳಲ್ಲಿ ಹರುಷ ತುಂಬಿತ್ತು. ಹೊಸ ಬೆಳಕಿನ, ಹೊಸ ಭರವಸೆಯ ಸೂರ್ಯ ಇನ್ನೇನು ನಮ್ಮ ಮಡಿಲಿನಲ್ಲಿ ಇರಲಿದ್ದಾನೆ ಎಂದು ಅವರೆಲ್ಲ ಕುಣಿದು ಕುಪ್ಪಳಿಸತೊಡಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಲ್ಲಂತೂ ಎಲ್ಲಿಲ್ಲದ ಚೇತರಿಕೆ ಬಂದಿತ್ತು. ಅವರೆಲ್ಲ ದೇಶದ ರಾಜಧಾನಿ ದಿಲ್ಲಿಯ ಕಡೆಗೆ ಮುಖ ಮಾಡಿ ಅಲ್ಲಿ ನಡೆದಿದ್ದ ಲಘುಬಗೆಯ ರಾಜಕೀಯ ಬೆಳವಣಿಗೆಗಳ ಸುದ್ದಿ-ಸದ್ದುಗಳನ್ನು ಕಿವಿಗೊಟ್ಟು ಆಲಿಸುತ್ತಿದ್ದರು.
ಬ್ರಿಟಿಷ್ ವ್ಹೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ರು ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ಸರದಾರ ವಲ್ಲಭಭಾಯಿ ಪಟೇಲ್ ಒಳಗೊಂಡು ಇತರೆ ಪ್ರಮುಖ ನಾಯಕರೊಂದಿಗೆ ನಡೆಸಿದ್ದ ಚರ್ಚೆ ಹಾಗೂ ಅಧಿಕಾರ ಹಸ್ತಾಂತರಿಸಲಿರುವ ದಿನಾಂಕದ ಕಡೆಗೆ ಲಕ್ಷ್ಯ ಕೊಟ್ಟಿದ್ದರು. ಇದರಲ್ಲಿ ಡಾ. ಪ್ರಭಾಕರ ಕೋರೆಯವರ ತಂದೆ ಬಸವಪ್ರಭು ಕೋರೆಯವರೂ ಒಬ್ಬರಾಗಿದ್ದರು. ಅವರಿಗೆ ಡಬಲ್ ಖುಷಿ ಇತ್ತು. ಒಂದು ಸ್ವಾತಂತ್ರ್ಯದ್ದಾದರೆ ಮತ್ತೊಂದು ಮಡದಿ ಶಾರದಾದೇವಿ ಕೋರೆ ತುಂಬು ಗರ್ಭಿಣಿ ಯಾಗಿರುವುದಾಗಿತ್ತು. ಎರಡೂ ಖುಷಿ ಹೊತ್ತು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಜನೋತ್ಸವ ಮತ್ತು ಕುತೂಹಲದಲ್ಲಿ ಪಾಲ್ಗೊಂಡಿದ್ದರು. ಈ ನಡುವೆ 1947ರ ಜುಲೈ ತಿಂಗಳಿನ ದಿನಗಳು ಮುಗಿದು, ಆಗಸ್ಟ್ ತಿಂಗಳು ಕಾಲಿರಿಸಿತು. ಅದೇ ತಿಂಗಳದ ಮೊದಲ ದಿನವೇ (ಆಗಸ್ಟ್ 1) ಶ್ರೀಮತಿ ಶಾರದಾದೇವಿಯವರು ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವೇ ಡಾ. ಪ್ರಭಾಕರ ಕೋರೆಯವರು. ದೇಶದ ಸ್ವಾತಂತ್ರ್ಯದ ಹೊಸ್ತಿಲಿನಲ್ಲಿ ಈ ಮಗು ಜನಿಸಿದ್ದು, ಇಡೀ ಪರಿವಾರಕ್ಕೆ ಅಪಾರ ಖುಷಿ ನೀಡಿತು. ಆ ಖುಷಿಯನ್ನು ಅವರು ಇಡೀ ಊರಿಗೆ ಹಂಚಿ ಹಬ್ಬ ಆಚರಿಸಿದರು. ಆಗ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಇನ್ನು ಕೇವಲ 14 ದಿನಗಳು ಮಾತ್ರ ಬಾಕಿ ಉಳಿದಿದ್ದವು. ಸ್ವಾತಂತ್ರ್ಯದ ಹೊಸ ಬೆಳಕಿನಲ್ಲಿ ಹುಟ್ಟಿದ ಈ ಮಗು ಈಗ ನಾನಾ ಕ್ಷೇತ್ರಗಳಲ್ಲಿ ಇಡೀ ದೇಶವೇ ನಿಬ್ಬೆರಗಾಗುವ ಸಾಧನೆ ಮಾಡಿದೆ. ಮುಂದೆ ಮಾಡಬೇಕೆನ್ನುವವರಿಗೆ ಮಾದರಿ ನೀಡಿದೆ.
ಪ್ರಭಾಕರ ಕೋರೆಯವರ ಬಾಲ್ಯ ಹುಟ್ಟೂರು ಅಂಕಲಿ ಗ್ರಾಮದಲ್ಲಿಯೇ ಕಳೆಯಿತು. ಕುಟುಂಬದ ಕಬ್ಬಿನ ಗದ್ದೆಗಳಲ್ಲಿ ತಿರುಗಾಡುವುದು, ಕೆಲಸದವರಿಗೆ ನೆರವಾಗುವುದನ್ನು ಮಾಡುತ್ತಿದ್ದರು. ದೃಷ್ಟಿ ಬೀರಿದಾಗ ನಿಸರ್ಗದ ಮಡಿಲಿನಲ್ಲಿ ಕಾಣಿಸುತ್ತಿದ್ದ ವೈಭವದ ದೃಶ್ಯಗಳು ಅವರ ಮನಸೂರೆ ಗೊಳ್ಳುತ್ತಿದ್ದವು. ಮೋಹಕ, ಭಾವುಕರಾಗಿ ನೋಡುತ್ತಿದ್ದರು. ವೈವಿಧ್ಯಮಯ ಸೃಷ್ಟಿಗೆ ನಮಿಸುತ್ತಿದ್ದರು. ಕೃಷ್ಣಾ ನದಿಯಲ್ಲಿ ಈಜಿ ಖುಷಿ ಪಡುತ್ತಿದ್ದರು. ಬಿಡುವು ಸಿಕ್ಕಾಗ ಗೆಳೆಯರೊಂದಿಗೆ ಫುಟ್ಬಾಲ್, ವ್ಹಾಲಿಬಾಲ್, ಕಬಡ್ಡಿ ಆಡುತ್ತಿದ್ದರು. ವಸ್ತಾದ ಎನ್ನುವ ಶಿಕ್ಷಕ ಕುಸ್ತಿ ತರಬೇತಿ ನೀಡುತ್ತಿದ್ದ. ಒಟ್ಟಾರೆ ಗ್ರಾಮ ಪರಿಸರ ಅವರಿಗೆ ನಂದಗೋಕುಲದ ನಿರ್ಮಾಣ ಮಾಡಿತ್ತು.
7ನೇ ತರಗತಿ ವರೆಗಿನ ಶಿಕ್ಷಣ ತಂದೆಯವರೇ ಸ್ಥಾಪಿಸಿದ್ದ ಅಂಕಲಿ ಎಜ್ಯುಕೇಶನ್ ಸೊಸೈಟಿಯಲ್ಲಿ ನಡೆಯಿತು. ತಂದೆ ಅತ್ಯಂತ ಶಿಸ್ತಿನ ಸಿಪಾಯಿ. ಜತೆಗೆ ದೈವೀಭಕ್ತ. ತಾಯಿ ಸಭ್ಯ ಗೃಹಿಣಿ, ಅನ್ನಪೂರ್ಣೇಶ್ವರಿ. ಮನೆಯಲ್ಲಿ ಅನ್ನ ದಾಸೋಹ ಯಾವಾಗಲೂ ಇದ್ದೇ ಇರುತ್ತಿತ್ತು.
ತಂದೆಗೆ ಖಾದಿ ಮೇಲೆ ವಿಪರೀತ ಪ್ರೇಮ. ಮಕ್ಕಳೂ ಅದನ್ನೇ ಧರಿಸಬೇಕೆಂದು ಪ್ರೇರೇಪಿಸುತ್ತಿದ್ದರು. ರಾತ್ರಿ 9 ಗಂಟೆ ಆಯಿತು ಎಂದರೆ ಎಲ್ಲ ಮಕ್ಕಳೂ ಮನೆಯಲ್ಲಿರಬೇಕಿತ್ತು. ತಂದೆ ಅಪ್ಪಟ ಕನ್ನಡಿಗನಾದರೂ, ಉದ್ಯಮಿಯಾಗಿದ್ದರಿಂದ ಗಡಿಯಲ್ಲಿ ಬಳಕೆಯಲ್ಲಿದ್ದ ಮರಾಠಿಯನ್ನೂ ತಿಳಿದಿರಬೇಕೆಂಬ ಆಸೆ ಇಟ್ಟುಕೊಳ್ಳುತ್ತಿದ್ದರು. ಆದರೆ ಪ್ರಭಾಕರ ಕೋರೆಯವರು ಮರಾಠಿ ಭಾಷೆಯನ್ನು ಅರಿತುಕೊಂಡರೂ ಕನ್ನಡ ಅಭಿಮಾನದಿಂದ ಒಂದಿಂಚೂ ಕದಲಲಿಲ್ಲ. ಕನ್ನಡ ಕಾರ್ಯಗಳನ್ನು ಎಳೆಯ ವಯಸ್ಸಿನಿಂದಲೇ ಆರಂಭಿಸಿದ್ದರು. ಈಗ ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದಾರೆ.
ಪ್ರಾಥಮಿಕ ಶಿಕ್ಷಣ ಪೂರ್ಣಗೊಂಡನಂತರ ಪ್ರಭಾಕರ ಕೋರೆಯವರು, ಪ್ರೌಢ ಶಿಕ್ಷಣಕ್ಕಾಗಿ ಕೆಎಲ್ ಇ ಸಂಸ್ಥೆಯ ಬೆಳಗಾವಿಯ ಜಿ.ಎ. ಹೈಸ್ಕೂಲ್ ಗೆ ಬಂದರು. ಮುಂದೆ ಇಲ್ಲಿನ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದರು. ತಮ್ಮ ನಾಲ್ಕು ಜನ ಸಹೋದರರು ಮತ್ತು ಮೂರು ಜನ ಸಹೋದರಿಯರಲ್ಲಿ ಪದವಿವರೆಗಿನ ಶಿಕ್ಷಣ ಪಡೆದ ಏಕೈಕ ವ್ಯಕ್ತಿ ಇವರಾಗಿದ್ದಾರೆ.
ಇವರು ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದದ್ದು, ಇದೇ ಸಂರ್ಭದಲ್ಲಿ ಜಪಾನ್ ದೇಶದ ಓಸಾಕಾದಲ್ಲಿ ಜರುಗಿದ ವಿದ್ಯಾರ್ಥಿ ಪರಿಷತ್ ನ ಸಮಾವೇಶ "ಎಕ್ಸಪೋ" ದಲ್ಲಿ ಪಾಲ್ಗೊಂಡದ್ದು ಅವರೊಳಗಿನ ನಾಯಕನನ್ನು ಗಟ್ಟಿಗೊಳಿಸಿತು. ಅದು ಪ್ರಗತಿಯತ್ತ ಮುನ್ನುಗ್ಗಲು ಪ್ರೇರಣೆ ನೀಡಿತು. ಅವರು ವಯಸ್ಕರಾದಂತೆ ಶಿಕ್ಷಣ, ಓದು, ಕೃಷಿ, ಸಹಕಾರ, ರಾಜಕೀಯ, ಚಲನಚಿತ್ರ ಉದ್ಯಮ ಮತ್ತು ಸಮುದಾಯಿಕ ಚಟುವಟಿಕೆಗಳಲ್ಲಿ ಅತೀವ ಆಸಕ್ತಿ ಬೆಳೆಸಿಕೊಂಡರು. ಇದೆಲ್ಲ ಅವರನ್ನು ಒಬ್ಬ ಅದ್ಭುತ ಸಂಘಟನಾಕಾರನನ್ನಾಗಿ ರೂಪಿಸಿತು.
ಈ ನಡುವೆ ಪ್ರಭಾಕರ ಕೋರೆ ಪುಣೆ ಫರ್ಗುಸನ್ ಕಾಲೇಜಿನಿಂದ ಬಿಎಸ್ ಸಿ ಪದವಿ ಪಡೆದಿದ್ದ ಆಶಾ ಕೊಠಾವಳೆ ಅವರೊಂದಿಗೆ 1973ರಲ್ಲಿ ಮದುವೆಯಾದರು. ಇದು ಅವರ ಜೀವನಕ್ಕೆ ಹೊಸ ತಿರುವು ನೀಡಿತು. ಪ್ರೀತಿಯ ಮಕ್ಕಳಾದ ಪ್ರೀತಿ, ದೀಪ್ತಿ ಮತ್ತು ಅಮಿತ್ ಅವರ ಜನ್ಮವಾಯಿತು. ಖುಷಿ ತುಪ್ಪದ ಕಣ ಕಣಗಳಂತೆ ಕುಟುಂಬದಲ್ಲಿ ತುಂಬಿಕೊಂಡಿತು. ಕೋರೆ ಸಿಟ್ಟಿನ ಸ್ವಭಾವವನ್ನು ತಿದ್ದಿದ ಕೀರ್ತಿ ಆಶಾತಾಯಿ ಕೋರೆ ಅವರಿಗೆ ಸಲ್ಲುತ್ತದೆ. ಕೋರೆ ಸಾಧನೆಯ ಹಿಂದೆಯೂ ಅವರೆ ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ. ಗಂಡ, ಹೆಂಡತಿಯ ಪ್ರೀತಿ ಲಕ್ಷ್ಮೀ ಮತ್ತು ನಾರಾಯಣನಂತೆ. ಈಗಲೂ ಅವರು ಮದುವೆಯ ಹೊಸ ದಿನಗಳ ಪ್ರೀತಿಯನ್ನೇ ಕಾಯ್ದುಕೊಂಡಿದ್ದಾರೆ. "ಮೇಡ್ ಫಾರ್ ಈಚ್ ಅದರ್" ಎನ್ನುವಂತೆ ಒಬ್ಬರು ಮತ್ತೊಬ್ಬರಿಗೆ ಶಕ್ತಿ, ಆಸರೆಯಾಗಿ ನಿಂತುಕೊಂಡಿದ್ದಾರೆ.
ಪ್ರಭಾಕರ ಕೋರೆ 1974ರಲ್ಲಿ ಅಂಕಲಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು. ಇವರ ಹಿರಿಯ ಸಹೋದರ ಚಿದಾನಂದ ಕೋರೆ ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದರು. ಆದರೆ 1981ರಲ್ಲಿ ಹೃದಯಾಘಾತದಿಂದ ಅಕಾಲಿಕವಾಗಿ ನಿಧನವಾದರು. 1963ರಲ್ಲಿ ತಂದೆ ಇಹಲೋಕ ತ್ಯಜಿಸಿದಾಗ ಅವರ ಜವಾಬ್ದಾರಿ ಹೊತ್ತಿದ್ದ ಇವರು ಅಗಲಿಕೆಯಾದದ್ದು ಕುಟುಂಬದ ಎಲ್ಲರಿಗೂ ಬರಸಿಡಿಲು ಬಡಿಸಿತು. ಸಂಸ್ಥೆಯಲ್ಲಿ ತೆರವಾದ ಇವರ ಸ್ಥಾನಕ್ಕೆ 1982ರಲ್ಲಿ ನಡೆದ ಉಪಚುನಾವಣೆಯಲ್ಲಿ ಪ್ರಭಾಕರ ಕೋರೆ ಅವರು ನಿರ್ಧೇಶಕರಾಗಿ ಆಯ್ಕೆಗೊಂಡರು. ಸಂಸ್ಥೆಯಲ್ಲಿ ಸವಾಲಿನ ಕೆಲಸಗಳನ್ನು ನಿಭಾಯಿಸಿ ಸೈ ಎನಿಸಿಕೊಂಡರು. ಇದು ಸಂಸ್ಥೆಗೆ 1984ರಲ್ಲಿ ನಡೆದ ನಿಗದಿತ ಚುನಾವಣೆಯಲ್ಲಿ ಪ್ರಭಾಕರ ಕೋರೆ ಅವರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿತು.
ಡಾ. ಕೋರೆ, ಸಂಸ್ಥೆ ಮತ್ತು ಅವುಗಳ ಆವರಣಗಳನ್ನು ಕಲಾತ್ಮಕವಾಗಿ ಕಟ್ಟಿದ್ದಾರೆ. ನಿಸರ್ಗ ಬಾಲ್ಯದಲ್ಲಿ ಅವರ ಮೇಲೆ ಬೀರಿದ್ದ ಪ್ರಭಾವದ ಛಾಪು ಇಲ್ಲಿ ಎದ್ದು ಕಾಣಿಸುತ್ತದೆ. ಕಟ್ಟಡಗಳ ಸೌಂದರ್ಯವೂ ಮನ ಸೆಳೆಯುತ್ತದೆ. ನಮ್ಮ ಸಂಸ್ಥೆಗಳೂ ಹೀಗಿರಬೇಕೆಂದು ಇತರರಲ್ಲಿ ಆಸೆ ಹುಟ್ಟಿಸುತ್ತವೆ.
ರಾಜಕೀಯವಾಗಿ ಡಾ. ಪ್ರಭಾಕರ ಕೋರೆ ಕರ್ನಾಟಕದ ಮುಖ್ಯಮಂತ್ರಿ, ಕೇಂದ್ರ ಸಚಿವ ಆಗದಿದ್ದರೂ, ಅಷ್ಟೇ ಗೌರವದ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಅಮೇರಿಕೆಯ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಛಾತಿಗಾರಿಕೆ ಮತ್ತು ಗೌರವ ಅವರಿಗೆ ಸಂದಿದೆ.
ಕರ್ನಾಟಕದ ವಿಧಾನ ಪರಿಷತ್ ಸದಸ್ಯ, ಸಭಾಪತಿ, ಮೂರು ಅವಧಿಗೆ ರಾಜ್ಯಸಭಾ ಸದಸ್ಯ, ರಾಜಕೀಯದ ಇತರೆ ಹುದ್ದೆ ಮತ್ತು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಲ್ಲೂ ತಮ್ಮ ಕಾರ್ಯಕುಶಲತೆಯ ಹೆಚ್ಚುಗಾರಿಕೆ ಮೆರೆದು, ಪಕ್ಷ, ಪ್ರತಿಪಕ್ಷದವರಿಂದಲೂ ಮೆಚ್ಚುಗೆ ಪಡೆದಿದ್ದಾರೆ.
ಕೋರೆ ಹೆಜ್ಜೆ ಇಟ್ಟಲ್ಲೆಲ್ಲ ತಮ್ಮ ಛಾಪು ಮತ್ತು ಪ್ರಭಾವ ಬಿಟ್ಟಿದ್ದಾರೆ. ಇದು ಅವರ ಸ್ವಭಾವವೆನ್ನಿ... ಇಲ್ಲವೆ ಸಮಾಜ ಅಥವಾ ಕೆಲಸದ ಕಾಳಜಿ, ಕಳಕಳಿ ಎನ್ನಿ. ಒಟ್ಟಾರೆ ಅವರೊಬ್ಬ ನಮ್ಮೊಳಗಿನ ದಂತಕಥೆಯಷ್ಟೆ...
ನಮಸ್ಕಾರ
ಜೈ ಹಿಂದ್...