24/03/2024
"ಎಲ್ಲಾದರೂ ಇರೂ ಎಂದಾದರೂ ಎಂದೆಂದಿಗೂ ನೀ ಮಾನವ ನಾಗಿರು". ಬಹಳ ಅದ್ಬತ, ಬೆಲೆ ಕಟ್ಟಲಾಗದ ಸಾಲುಗಳನ್ನು ಮನದಟ್ಟು ಮಾಡಿಕೊಳ್ಳುತ್ತಾ.
"ತಾವಿರುವ ಊರೇ ತವರೂರು"
ಎಂದು ಬಾವಿಸುತ್ತಾ.ಇಂದು ನಡೆದ
ನಮ್ಮೂರ ಹಬ್ಬ : ನಮ್ಮೂರ ಜಾತ್ರೆ
ಇದರ ಬಗ್ಗೆ ಕೆಲ ಸವಿನೆನಪುಗಳು
ಜಾತ್ರೆಯೆಂದರೆ ಸಾಕು.. ಥಟ್ಟನೆ ಮನಸ್ಸು ಬಾಲ್ಯಕ್ಕೋಡುತ್ತದೆ!
ಅಪ್ಪನ ಬೆನ್ನುಹತ್ತಿ ಹೆಗಲ ಮೇಲೆ ಕೂತು ಪುಟ್ಟ ಕಣ್ಣುಗಳನ್ನ ಇಷ್ಟಗಲ ಅರಳಿಸಿ ನೋಡಿದ್ದ ಇಡೀ ಜಾತ್ರೆಯ ಪನೋರಮಿಕ್ ನೋಟ ಮತ್ತೆ ಅಷ್ಟೇ ರಂಗು ರಂಗಾಗಿ ತೆರೆದುಕೊಳ್ಳುತ್ತದೆ..
ಬೆಂಡು-ಬತ್ತಾಸು, ಸರ-ಬಳೆ, ಆಟಗಳ ಜಾತ್ರೆ ಶುರು! ಮಕ್ಕಳ ಪಾಲಿನ ಅಸಲಿ ಸಂಭ್ರಮ ಶುರುವಾಗುವುದೇ ಆಗ! ಸಂಜೆ ಬಾನಿನಂಚಿನಲ್ಲಿ ಸೂರ್ಯ ಕಾಣೆಯಾಗುತ್ತಿದ್ದಂತೆಯೇ ಊರ ಬೀದಿಗಳ ತುಂಬ ಚಿಕ್ಕ, ಪುಟ್ಟ, ದೊಡ್ಡ ವಿದ್ಯುತ್ ದೀಪಸೂರ್ಯರ ಝಗಮಗ ಕಾಣತೊಡಗಿ ಕಣ್ಣು ಕೋರೈಸುತ್ತದೆ! ಒಂದು ಬದಿಯಲ್ಲಿ ಬಗೆಬಗೆ ತಿಂಡಿ ತಿನಿಸುಗಳ ಅಂಗಡಿಗಳಾದರೆ ಇನ್ನೊಂದು ಬದಿಯಲ್ಲಿ ಆಟದ ಸಾಮಾನು, ಬಳೆ, ಸರ, ಓಲೆ ಇತ್ಯಾದಿ ಆಭರಣ, ಅಲಂಕಾರ ಸಾಮಗ್ರಿಗಳ ಭಂಡಾರಗಳು! ಮತ್ತೊಂದು ಕಡೆ ದೊಡ್ಡ ದೊಡ್ಡ ಆಟದ ಯಂತ್ರಗಳು.. ಜಿಯಾಂಟ್ ವ್ಹೀಲ್, ಕೊಲಂಬಸ್, ತಿರುಗಣೆ.. ಸರ್ಕಸ್, ಜಾದೂ ಪ್ರದರ್ಶನಗಳು! ಅಪ್ಪ ಅಮ್ಮನ ಕೈ ಹಿಡಿದು ಈ ಅಭಿನವ ಇಂದ್ರಲೋಕಕ್ಕೆ ಕಾಲಿಡುವ ಮಕ್ಕಳ ಕಣ್ಣುಗಳಲ್ಲಿ ಮುಗಿಯದ ಬೆರಗು, ಖುಷಿ, ಉತ್ಸಾಹ! ಹುಡುಗಿಯರ ಮಂದೆ ಬಣ್ಣಬಣ್ಣದ ಬಳೆಗಳ ಬೆನ್ನತ್ತಿ ಅಂಗಡಿಗಳನ್ನ ಅಲೆಯುತ್ತಿದ್ದರೆ ಛೇಡಿಸಿ ಕಾಡುವ ಹುಡುಗರ ದಂಡು ಇವರ ಹಿಂದೆ ಹಿಂದೆ! ಜಾತ್ರೆ ಎಂಬುದು ಸಂಭ್ರಮದ ಸಮಾನಾರ್ಥಕ ಪದವೇ ಸರಿ!
ಅಪ್ಪನಿಂದ ಮಂಜೂರಾದ 10 (1980-95) ರಲ್ಲಿ ರೂಪಾಯಿಯ ಬಜೆಟ್ಟು ತಾತನ ದಯೆಯಿಂದ 15 ರೂ.ಗಳಿಗೇರಿ ಅಷ್ಟರಲ್ಲೇ ಇಡೀ ಜಾತ್ರೆಯನ್ನೇ ಕೊಂಡುಕೊಳ್ಳುವವನ ಹಾಗೆ ಬೀಗಿದ್ದು ಇಂದಿಗೂ ಮನದಲ್ಲಿ ಅಚ್ಚ ಹಸಿರು! ರಂಗುರಂಗಿನ ಮಿಣಿ ಮಿಣಿ ದೀಪಗಳ ಛಾವಣಿಯ ಕೆಳಗೆ ಅಮ್ಮನ ಕೈ ಹಿಡಿದು ಕುಣಿಯುತ್ತಾ ಕುಪ್ಪಳಿಸುತ್ತಾ ನಡೆದಿದ್ದನ್ನ ಮರೆಯಲು ಸಾಧ್ಯವೇ?! ತಿಮ್ಮಪ್ಪನ ದರ್ಶನಕ್ಕಾಗಿ ಸರತಿಯಲ್ಲಿ ನಿಂತ ನಮ್ಮಮ್ಮನ ಸೆರಗ ತುದಿಯನ್ನ ಜಗ್ಗುತ್ತಾ “ಇನ್ನೂ ಎಷ್ಟು ಹೊತ್ತಮ್ಮಾ… ಬಾ ಜಾತ್ರೆ ನೋಡಕ್ಕೆ ಹೋಗಣ, ನಾನು ಆಟ ಆಡ್ಬೇಕು ಬಾ..” ಅಂತ ಅವಸರಿಸುತ್ತಾ ಗೋಗರೆದು ಹಠ ಹಿಡಿದ ನೆನಪು ಹೊಂಗೆ ನೆರಳಷ್ಟೇ ತಂಪು! ದೈವದ ದರ್ಶನವಾದಾಗ ಅದರ ರೂಪ ಕಂಡು ಭಕ್ತಿಗಿಂತ ಭಯವೇ ಉಕ್ಕಿ ಕಣ್ಮುಚ್ಚಿ ಕೈ ಮುಗಿದಿದ್ದು.. ಜಾತ್ರೆಯಲ್ಲಿ ಕೊಳ್ಳಬೇಕೆಂದು ಮನದಲ್ಲೇ ನೋಟ್ ಮಾಡಿಟ್ಟುಕೊಂಡಿರುತ್ತಿದ್ದ ಆಟದ ಸಾಮಾನು, ತಿನಿಸುಗಳ ಪಟ್ಟಿಯನ್ನ ಅಮ್ಮನಿಗೆ ನೆನಪಿಸುತ್ತಾ ಅಪ್ಪನನ್ನ ಪುಸಲಾಯಿಸಲಿಕ್ಕೆ ಅವಳ ಹತ್ರ ಅರ್ಜಿ ಹಾಕಿದ್ದು.. ಒಮ್ಮೆಯಂತೂ ಅಮ್ಮನ ಕೈ ತಪ್ಪಿ ಜಾತ್ರೆಯಲ್ಲಿ ಒಬ್ಬಂಟಿಯಾಗಿ ಕಂಗಾಲಾಗಿ ಅತ್ತಿದ್ದು.. ಮುಂದಿನ ವರ್ಷ ಜಾತ್ರೆಯಲ್ಲಿ ಮುನ್ನೆಚ್ಚರಿಕೆ ಕ್ರಮವೆಂಬಂತೆ ಅಂಗಿಯ ಜೇಬಿನಲ್ಲಿ 5 ರೂಪಾಯಿಯಿಟ್ಟು ಎಲ್ಲಾದರೂ ತಪ್ಪಿಸಿಕೊಂಡರೆ ಬಸ್ ಹತ್ತಿ ಊರಿಗೆ ಬಂದು ಬಿಡು ಎಂದು ಮನೆಯವರು ಧೈರ್ಯ ಹೇಳಿದ್ದು.