06/03/2017
ಕೂಡಲಸಂಗಮದಲ್ಲಿ ಆದಿ ವೀರಶೈವ ಸಮಾವೇಶ
ಕಲಬುರಗಿ: ಮುಂದಿನ ತಿಂಗಳು ಕೂಡಲ ಸಂಗಮದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಆದಿ ವೀರಶೈವ ಸಮಾಜದ ಸಮಾವೇಶಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದು ಅವಶ್ಯಕವಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಶಂಕರಗೌಡ ಹೇಳಿದರು.
ನಗರದ ಜಗತ್ ಪ್ರದೇಶದ ಮೈಲಾರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ನಡೆದ ಅಖೀಲ ಕರ್ನಾಟಕ ಆದಿ ವೀರಶೈವ ಸಮಾಜದ ರಾಜ್ಯಮಟ್ಟದ ಸಮಾವೇಶದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆದಿ ವೀರಶೈವ ಸಮಾಜ ಬಾಂಧವರು ರಾಜ್ಯ ಸಮಾವೇಶಕ್ಕೆ ಒಕ್ಕೊರಲಿನಿಂದ ಕೈ ಜೋಡಿಸಿ, ಸಮಾಜದ ಸಂಘಟನೆ ಸದೃಢಗೊಳಿಸಬೇಕು ಎಂದರು.
ರಾಜ್ಯ ಮಟ್ಟದ ಸಮಾವೇಶಕ್ಕೆ ತಾಲೂಕು, ಹೋಬಳಿ ಹಾಗೂ ಹಳ್ಳಿ ಮಟ್ಟದಲ್ಲಿಯೂ ಜನಜಾಗೃತಿ ಮೂಡಿಸಿ ಸಮಾವೇಶದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು. ಸಂಘಟಿತ ಸಮಾಜ ನಿರ್ಮಿಸಲು ಒಂದಾಗಲು ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಸೋಮಶೇಖರ ಟೆಂಗಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಗುಂಡೇರಾವ್ ಹಾಗರಗಿ, ಜಿ.ಪಂ. ಮಾಜಿ ಸದಸ್ಯೆ ಶಶಿಕಲಾ ಟೇಂಗಳಿ, ಸಮಾಜದ ಮುಖಂಡರಾದ ವೀರಣ್ಣ ಮಹಾಂತಗೋಳ,
ರಾಜೇಂದ್ರ ಕರೆಕಲ್, ಶಿವಪುತ್ರಪ್ಪ ಪಾಟೀಲ ಮುನ್ನಹಳ್ಳಿ, ಹಣಮಂತರಾವ ಪಾಟೀಲ ಕೊಟನೂರ, ಗುರುಬಸವಪ್ಪ ಪಾಟೀಲ, ಚಂದ್ರಕಾಂತ ಪಾಟೀಲ, ಶಿವಪುತ್ರಪ್ಪ ಬುರುಡೆ, ಆದಿ ವೀರಶೈವ ಸಮಾಜದ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.