30/12/2024
ಸೋಮವಾರ ಶಿವನ ಅನುಗ್ರಹ ಪಡೆಯಲು
1) ಶಿವೋಹಂ ಶಿವೋಹಮ್
ರಚನೆ: ಆದಿ ಶಂಕರಾಚಾರ್ಯರು
ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ | ನ ಚ ವ್ಯೋಮ ಭೂಮಿರ್-ನ ತೇಜೋ ನ ವಾಯುಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 1 ||
ನಾನು ಮನಸ್ಸು, ಬುದ್ಧಿ , ಅಹಂಕಾರ , ವಿಚಾರಗಳಿಗೆ ನಿಲುಕುವವನಲ್ಲ..ನಾನು ಕಿವಿ , ನಾಲಿಗೆ , ಮೂಗು , ಕಣ್ಣುಗಳಿಂದ ಗ್ರಹಿಸಲ್ಪಡುವವನಲ್ಲ..ನಾನು ಆಕಾಶ , ಭೂಮಿ , ಬೆಂಕಿ , ವಾಯುಗಳಿಗೂ ಸಿಗುವವನಲ್ಲ..ಚಿದಾನಂದರೂಪನಾದಂತಹ (ಜ್ಞಾನ ಹಾಗೂ ಆನಂದ) ಶಿವ ನಾನು ಶಿವ ನಾನು..
ಅಹಂ ಪ್ರಾಣ ಸಂಜ್ಞೋ ನ ವೈ ಪಂಚ ವಾಯುಃ ನ ವಾ ಸಪ್ತಧಾತುರ್-ನ ವಾ ಪಂಚ ಕೋಶಾಃ | ನವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 2 ||
ನಾನು ಚಲನೆಯಲ್ಲಿರುವ ಪ್ರಾಣವಲ್ಲ , ಪಂಚವಾಯುವಲ್ಲ , ಸಪ್ತಧಾತುಗಳಲ್ಲ , ಪಂಚಕೋಶನಲ್ಲ , ಮಾತು , ಕೈ , ಪಾದಗಳಿಗೂ ನಿಲುಕುವವನಲ್ಲ ನಾನು ಚಿದಾನಂದರೂಪನಾದ ಶಿವ , ಶಿವ..
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ ಮದೋ ನೈವ ಮೇ ನೈವ ಮಾತ್ಸರ್ಯಭಾವಃ | ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 3 ||
ನನಗೆ ದ್ವೇಷ – ಪ್ರೇಮಗಳಿಲ್ಲ , ಲೋಭ-ಮೋಹಗಳಿಲ್ಲ , ಅಹಂಕಾರ-ಮಾತ್ಸರ್ಯಗಳಿಲ್ಲ,ಧರ್ಮ-ಅರ್ಥ-ಕಾಮ ಮೋಕ್ಷಗಳಿಲ್ಲ..ಚಿದಾನಂದರೂಪನಾದ ನಾನು ಶಿವ , ನಾನು ಶಿವ
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಃ | ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 4 ||
ಪುಣ್ಯ-ಪಾಪಗಳಿಲ್ಲ , ಸುಖ-ದುಃಖಗಳಿಲ್ಲ , ಮಂತ್ರ , ತೀರ್ಥ , ವೇದ , ಯಜ್ಞಗಳು ಬೇಕಿಲ್ಲ , ಭೋಜನ , ತಿಂಡಿಗಳನ್ನು ಸೇವಿಸುವವನಲ್ಲ..ಆದರೆ ಚಿದಾನಂದರೂಪನಾದ ನಾನು ಶಿವ, ಶಿವ…
ನ ಮೃತ್ಯುರ್-ನ ಶಂಕಾ ನ ಮೇ ಜಾತಿ ಭೇದಃ ಪಿತಾ ನೈವ ಮೇ ನೈವ ಮಾತಾ ನ ಜನ್ಮ | ನ ಬಂಧುರ್-ನ ಮಿತ್ರಂ ಗುರುರ್ನೈವ ಶಿಷ್ಯಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 5 ||
ನನಗೆ ಮೃತ್ಯುವಿಲ್ಲ , ಅನುಮಾನವಿಲ್ಲ , ನನಗೆ ಜಾತಿಭೇದಗಳಿಲ್ಲ , ತಂದೆ-ತಾಯಿಗಳಿಲ್ಲ,ಜನ್ಮವಿಲ್ಲ , ಬಂಧುಗಳಿಲ್ಲ , ಮಿತ್ರರಿಲ್ಲ , ಗುರುವಿಲ್ಲ , ಶಿಷ್ಯರಿಲ್ಲ ನಾನು ಚಿದಾನಂದರೂಪನಾದ ಶಿವ ಶಿವ..
ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ | ನ ವಾ ಬಂಧನಂ ನೈವ ಮುಕ್ತಿರ್ ನ ಬಂಧಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 6 ||
ಸಂದೇಹಗಳಿಲ್ಲ, ಆಕಾರವಿಲ್ಲ , ಜ್ಞಾನದಿಂದ ಶರೀರದ ಯಾವ ಇಂದ್ರಿಯಗಳ ಜೊತೆಗೂ ಸಂಬಂಧ ಹೊಂದಿದವನಲ್ಲ , ನನಗೆ ಬಂಧನ-ಮುಕ್ತಿಗಳಿಲ್ಲ..ಚಿದಾನಂದರೂಪನಾದ ನಾನು ಶಿವ ಶಿವ..
ಶಿವೋಹಂ ಶಿವೋಹಂ, ಶಿವೋಹಂ ಶಿವೋಹಂ ನಾನು ಶಿವ , ನಾನು ಶಿವ , ನಾನು ಶಿವ , ನಾನು ಶಿವ ಆರು ಶ್ಲೋಕಗಳಿರುವುದಕ್ಕೆ ಷಟ್ಕಮ್ ಎಂದು ಕರೆಯುತ್ತಾರೆ..
ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ ಸ್ತೋತ್ರ ಶ್ರೀ ನಿರ್ವಾಣ-ಷಟ್ಕಮ್. ಆಚಾರ್ಯರು , ಭಗವಾನ್ ಶಂಕರನ ಸ್ವರೂಪವನ್ನು ಸರಳ-ಸುಂದರವಾಗಿ ತಿಳಿಸಿದ್ದಾರೆ.. ಯಾವ ಚಿಂತನೆಗೂ ನಿಲುಕದ ,
ಚಿದಾನಂದ ಸ್ವರೂಪನಾದ ಶಂಕರ ಲೋಕಕ್ಕೆ ಸನ್ಮಂಗಲವನ್ನುಂಟುಮಾಡಲಿ.
2) ಶಿವಮಾನಸ ಪೂಜೆ.
ರಚನೆ : ಆದಿ ಶಂಕರಾಚಾರ್ಯರು
ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ , ನಾನಾರತ್ನ ವಿಭೂಷಿತಂ ಮೃಗಮದಾ ಮೋದಾಂಕಿತಂ ಚಂದನಮ್ | ಜಾತೀ ಚಂಪಕ ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ , ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ || 1 ||
ಹೇ ಪಶುಪತಿ (ಈಶ್ವರ) , ರತ್ನಗಳಿಂದ ಮಾಡಲ್ಪಟ್ಟಿರುವ ಈ ಸಿಂಹಾಸನವನ್ನು ನಿನಗಿತ್ತಿರುವೆ..ಸ್ನಾನ ಮಾಡಲು ಹಿಮಾಲಯದ ನೀರು , ಧರಿಸಲು ಪವಿತ್ರವಾದಂತಹ ವಸ್ತ್ರ ,ಬೆಲೆಬಾಳುವ ರತ್ನಗಳನ್ನು ನೀಡಿರುವೆ..ಕಸ್ತೂರಿ ಹಾಗೂ ಗಂಧವನ್ನು ಸಮರ್ಪಿಸಿರುವೆ..ಜಾತೀ , ಚಂಪಕ , ಬಿಲ್ವಪತ್ರೆ ಮುಂತಾದ ಪುಷ್ಪ-ಪತ್ರೆಗಳನ್ನು , ಧೂಪವನ್ನು , ದೀಪವನ್ನೂ ನೀಡಿರುವೆ..ಹೇ ದಯಾನಿಧಿ ನನ್ನ ಮನಸ್ಸಿನಿಂದ ಸಮರ್ಪಿಸಿರುವ ಈ ಎಲ್ಲಾ ವಸ್ತುಗಳನ್ನು ದಯವಿಟ್ಟು ಸ್ವೀಕರಿಸು..
ಸೌವರ್ಣೇ ನವರತ್ನಖಂಡ ರಚಿತೇ ಪಾತ್ರೇ ಘೃತಂ ಪಾಯಸಂ , ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಮ್ | ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರ ಖಂಡೋಜ್ಜ್ಚಲಂ , ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || 2 ||
ನವರತ್ನಗಳಿಂದ ಕೂಡಿರುವ ಚಿನ್ನದ ಪಾತ್ರೆಯಲ್ಲಿ ನಿನಗೆ ತುಪ್ಪ ಹಾಗೂ ಪಾಯಸವನ್ನು ಅರ್ಪಿಸಿರುವೆ..ಮೊಸರು ಹಾಗೂ ಹಾಲಿನಿಂದ ತಯಾರಿಸಲಾದ ಐದು ವಿಧ ನೈವೇದ್ಯಗಳನ್ನು ನಿನಗೆ ನೀಡಿರುವೆ..ಮಧುರ ಫಲಗಳಿಂದ ತಯಾರಿಸಲಾದ ಪಾನಕವನ್ನೂ ನೀಡಿರುವೆ..ಸುಗಂಧದಿಂದ ಕೂಡಿದ ನೀರನ್ನು , ಕರ್ಪೂರದಿಂದ ಬೆಳಗುತ್ತಿರುವ ದೀಪ , ತಾಂಬೂಲ ಎಲ್ಲವನ್ನೂ ನನ್ನ ಮನಸ್ಸಿನಿಂದ ನೀಡಿರುವೆ..ಹೇ ಪ್ರಭು ಶಂಕರ ಇದನ್ನೆಲ್ಲ ದಯವಿಟ್ಟು ಸ್ವೀಕರಿಸು..
ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ , ವೀಣಾ ಭೇರಿ ಮೃದಂಗ ಕಾಹಲಕಲಾ ಗೀತಂ ಚ ನೃತ್ಯಂ ತಥಾ | ಸಾಷ್ಟಾಂಗಂ ಪ್ರಣತಿಃ ಸ್ತುತಿ-ರ್ಬಹುವಿಧಾ-ಹ್ಯೇತತ್-ಸಮಸ್ತಂ ಮಯಾ , ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ || 3 ||
ಛತ್ರ , ಚಾಮರ , ವ್ಯಜನಗಳನ್ನು , ದರ್ಪಣವನ್ನು , ವೀಣೆ , ಭೇರಿ , ಮೃದಂಗ ಮುಂತಾದ ವಾದ್ಯವಿಶೇಷಗಳನ್ನು , ನೃತ್ಯ ಹಾಗೂ ಗೀತೆಯನ್ನು , ಸಾಷ್ಟಾಂಗ ನಮಸ್ಕಾರ , ಹಲವು ವಿಧಗಳ ಪ್ರಾರ್ಥನೆ , ಈ ಎಲ್ಲಾ ವಸ್ತುಗಳನ್ನು ಸಂಕಲ್ಪದಿಂದ ಸಮರ್ಪಿಸಿರುವೆ…ಹೇ ವಿಭು ಇವುಗಳನ್ನೆಲ್ಲಾ ಸ್ವೀಕರಿಸು..
ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ , ಪೂಜಾ ತೇ ವಿಷಯೋಪಭೋಗ-ರಚನಾ ನಿದ್ರಾ ಸಮಾಧಿಸ್ಥಿತಿಃ | ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ , ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ || 4 ||
ಹೇ ಶಂಭು..ನನ್ನ ಆತ್ಮ ನಿನ್ನ ಮಂದಿರ..ನನ್ನ ಸಮಸ್ತಕ್ರಿಯೆಗಳು ನಿನ್ನವು..ನನ್ನ ಪ್ರಾಣ , ಶರೀರ , ಮನೆ , ವಿಷಯಗಳ ಅನುಭವ ಎಲ್ಲವೂ ನಿನ್ನದು..ನನ್ನ ನಿದ್ರೆ ನಿನ್ನ ಧ್ಯಾನ , ನನ್ನ ಚಲನೆ ನಿನಗೆ ಪ್ರದಕ್ಷಣೆ , ನಾನಾಡುವ ಮಾತುಗಳು ನಿನ್ನ ಸ್ತೋತ್ರ , ನಾನು ಯಾವ್ಯಾವ ಕರ್ಮವನ್ನು ಮಾಡುತ್ತಿದ್ದೇನೋ ಅದೆಲ್ಲವೂ ನಿನ್ನ ಆರಾಧನೆಯಷ್ಟೇ..
ಕರ ಚರಣ ಕೃತಂ ವಾಕ್ಕಾಯಜಂ ಕರ್ಮಜಂ ವಾ , ಶ್ರವಣ ನಯನಜಂ ವಾ ಮಾನಸಂ ವಾಪರಾಧಮ್ | ವಿಹಿತಮವಿಹಿತಂ ವಾ ಸರ್ವಮೇತತ್-ಕ್ಷಮಸ್ವ , ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ || 5 ||
ಹೇ ದಯಾನಿಧಿ , ಮಹಾದೇವ , ಶಂಭು..ಹಸ್ತದಿಂದಾಗಲಿ , ಪಾದಗಳಿಂದಾಗಲಿ , ಮಾತಿನಿಂದಾಗಲಿ , ಕರ್ಮಗಳಿಂದಾಗಲಿ , ಕಿವಿಯಿಂದಾಗಲಿ , ಕಣ್ಣುಗಳಿಂದಾಗಲಿ , ಮನಸ್ಸಿನಿಂದಾಗಲಿ , ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ನಾನೇನೇ ಅಪರಾಧಗಳನ್ನು ಮಾಡಿದ್ದರೂ ದಯವಿಟ್ಟು ಕ್ಷಮಿಸು..
ಮಾತಾ ಚ ಪಾರ್ವತೀದೇವಿ ಪಿತಾ ದೇವೋ ಮಹೇಶ್ವರಃ | ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್ ||
ನನ್ನ ತಾಯಿ ಪಾರ್ವತೀದೇವಿ , ತಂದೆ ಮಹೇಶ್ವರದೇವ..ನನ್ನ ಬಂಧುಬಳಗ ಶಿವಭಕ್ತರು..ಮೂರು ಲೋಕಗಳೇ ನನ್ನ ದೇಶ..
ದೇವರನ್ನು ಸ್ಮರಿಸಲು ಪೂಜೆ ಪುನಸ್ಕಾರಗಳು ಬೇಕಿಲ್ಲ..ಮನದ ಭಕ್ತಿಯೊಂದೇ ಸಾಕೆಂದು ಶ್ರೀ ಶಂಕರರ ಈ ಸ್ತೋತ್ರ ತಿಳಿಸುತ್ತದೆ..
2) ಶಿವಾಷ್ಟಕಮ್ ಮಂತ್ರದ ಅರ್ಥ
ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ | ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 1 ||
ಪ್ರಭುವಾದ , ನಮ್ಮ ಜೀವದ ಅಧಿಪತಿಯಾದ , ವಿಶ್ವಕ್ಕೆ ಒಡೆಯನಾದ , ಸಕಲಲೋಕಗಳಿಗೂ ರಾಜನಾದ , ಸದಾ ಅನಂದಿತನಾಗಿರುವ , ಚರಾಚರವಸ್ತುಗಳನ್ನೂ ಬೆಳಗಿಸುವ , ಭೂತಗಳ ಒಡೆಯನಾದ ಶಿವ , ಶಂಕರ , ಶಂಭು , ಈಶಾನ ಮುಂತಾದ ಹೆಸರಿನಿಂದ ಪೂಜಿಸಲ್ಪಡುವ ಈಶ್ವರನಿಗೆ ನಮಸ್ಕಾರಗಳು
ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ ಪಾಲಮ್ | ಜಟಾಜೂಟ ಗಂಗೋತ್ತರಂಗೈ ರ್ವಿಶಾಲಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 2||
ಕತ್ತಿನಲ್ಲಿ ರುಂಡಮಾಲೆಯನ್ನು , ಶರೀರದಲ್ಲಿ ಸರ್ಪಜಾಲವನ್ನು ಧರಿಸಿರುವ , ಮಹಾಕಾಲನೆಂಬ ರಾಕ್ಷಸನನ್ನು ಸಂಹರಿಸಿರುವ , ಗಣಗಳ ಪ್ರಭುವಾದ , ವಿಶಾಲವಾದ ಗಂಗೆಯ ಅಲೆಗಳು ಜಟೆಯಿಂದ ಧುಮ್ಮಿಕ್ಕುತ್ತಿರುವ ಶಿವ , ಶಂಕರ , ಶಂಭು , ಈಶೆನೆಂದು ಕರೆಯಲ್ಪಡುವ ಈಶ್ವರನಿಗೆ ನಮಸ್ಕಾರಗಳು..
ಮುದಾಮಾಕರಂ ಮಂಡನಂ ಮಂಡಯಂತಂ ಮಹಾ ಮಂಡಲಂ ಭಸ್ಮ ಭೂಷಾಧರಂ ತಮ್ | ಅನಾದಿಂ ಹ್ಯಪಾರಂ ಮಹಾ ಮೋಹಮಾರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 3 ||
ಸಂತೋಷದಿಂದ ಈ ಜಗತ್ತನ್ನು ಅಲಂಕರಿಸಿರುವ ತಾನೇ ಜಗತ್ತಿನಂತಿರುವ, ಭಸ್ಮವನ್ನು ಧರಿಸಿಕೊಂಡಿರುವ , ಆದಿಯಿಲ್ಲದ , ಅಪರಿಮಿತನಾದ , ಭವದ ವ್ಯಾಮೋಹಗಳನ್ನು ನಾಶಪಡಿಸುವ ಶಿವ , ಶಂಕರ , ಶಂಭು , ಈಶಾನ ಮುಂತಾದ ಹೆಸರುಗಳಿಂದ ಸ್ತುತಿಸಲ್ಪಡುವ ಈಶ್ವರನನ್ನು ಸ್ಮರಿಸುತ್ತೇನೆ..
ವಟಾಧೋ ನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪ ನಾಶಂ ಸದಾ ಸುಪ್ರಕಾಶಮ್ | ಗಿರೀಶಂ ಗಣೇಶಂ ಸುರೇಶಂ ಮಹೇಶಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 4 ||
ವಟವೃಕ್ಷದ ಕೆಳಗೆ ವಾಸ ಮಾಡುವ , ಜೋರಾಗಿ ಅಟ್ಟಹಾಸಗೈಯುವ , ಮಹಾಪಾಪಗಳನ್ನೂ ನಾಶಪಡಿಸುವ , ಸದಾ ಪ್ರಕಾಶಿಸುವ , ಪರ್ವತರಾಜನಾದ , ಗಣಗಳ ಪ್ರಭುವಾದ , ದೇವರುಗಳ ರಾಜನಾದ , ಮಹೇಶನಾದ , ಶಿವ , ಶಂಕರ , ಶಂಭು , ಈಶಾನ ಮುಂತಾದ ಹೆಸರುಗಳಿಂದ ಪ್ರಸಿದ್ಧನಾಗಿರುವ ಈಶ್ವರನನ್ನು ನಾನು ಸ್ಮರಿಸುತ್ತೇನೆ..
ಗಿರೀಂದ್ರಾತ್ಮಜಾ ಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾಪನ್ನ ಗೇಹಮ್ | ಪರಬ್ರಹ್ಮ ಬ್ರಹ್ಮಾದಿಭಿರ್-ವಂದ್ಯಮಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 5 ||
ಹಿಮಾಲಯದ ಮಗಳಿಗೆ (ಪಾರ್ವತಿಗೆ) ಅರ್ಧಶರೀರವನ್ನೇ ನೀಡಿರುವ , ಕೈಲಾಸ ಪರ್ವತದಲ್ಲಿ ವಾಸಿಸುವ , ಬ್ರಹ್ಮನ ಆತ್ಮವಾಗಿರುವ , ಬ್ರಹ್ಮಾದಿ ದೇವತೆಗಳಿಂದ ಸದಾ ವಂದಿತನಾಗಿರುವ ಶಿವ , ಶಂಕರ , ಶಂಭು , ಈಶಾನ ಮುಂತಾದ ಹೆಸರುಗಳಿಂದ ಪ್ರಖ್ಯಾತನಾಗಿರುವ ಈಶ್ವರನನ್ನು ನಾನು ಸ್ಮರಿಸುತ್ತೇನೆ..
ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಂಭೋಜ ನಮ್ರಾಯ ಕಾಮಂ ದದಾನಮ್ | ಬಲೀವರ್ಧಮಾನಂ ಸುರಾಣಾಂ ಪ್ರಧಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 6 ||
ಕಪಾಲ ಹಾಗೂ ತ್ರಿಶೂಲಗಳನ್ನು ಕೈಯಲ್ಲಿ ಹಿಡಿದಿರುವ , ಚರಣಕಮಲಗಳಲ್ಲಿ ಶರಣಾದವರ ಮನೋಕಾಮನೆಗಳನ್ನು ಪೂರೈಸುವ , ನಂದಿಯನ್ನು ವಾಹನವನ್ನಾಗಿಸಿಕೊಂಡಿರುವ , ಸುರರಲ್ಲಿ ಶ್ರೇಷ್ಠನಾಗಿರುವ , ಶಿವ , ಶಂಕರ , ಶಂಭು , ಈಶಾನ ಮುಂತಾದ ಹೆಸರುಗಳಿಂದ ಪೂಜಿಸಲ್ಪಡುವ ಈಶ್ವರನಿಗೆ ನನ್ನ ನಮನಗಳು..
ಶರಚ್ಚಂದ್ರ ಗಾತ್ರಂ ಗಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೇಶಸ್ಯ ಮಿತ್ರಮ್ | ಅಪರ್ಣಾ ಕಳತ್ರಂ ಸದಾ ಸಚ್ಚರಿತ್ರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 7 ||
ಶರತ್ಕಾಲದ ಚಂದ್ರನ ಗಾತ್ರವನ್ನು ಹೊಂದಿರುವ , ಗಣಗಳಿಗೆ ಆನಂದವನ್ನು ನೀಡುವ , ತ್ರಿನೇತ್ರಗಳನ್ನು ಹೊಂದಿರುವ , ಕುಬೇರನ ಮಿತ್ರನಾದ , ಪಾರ್ವತಿಯ ಪತಿಯಾದ , ಸದ್ಗುಣಗಳನ್ನು ಹೊಂದಿರುವ , ಶಿವ , ಶಂಕರ , ಶಂಭು , ಈಶಾನ ಮುಂತಾದ ಹೆಸರುಗಳಿಂದ ಸ್ತುತಿಸಲ್ಪಡುವ ಈಶ್ವರನಿಗೆ ನನ್ನ ನಮನಗಳು..
ಹರಂ ಸರ್ಪಹಾರಂ ಚಿತಾ ಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ| ಶ್ಮಶಾನೇ ವಸಂತಂ ಮನೋಜಂ ದಹಂತಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 8 ||
ಭವದ ದುಃಖಗಳನ್ನು ಪರಿಹರಿಸುವ , ಸರ್ಪಹಾರವನ್ನು ಧರಿಸಿರುವ , ಸ್ಮಶಾನದಲ್ಲೇ ವಿಹರಿಸುವ , ಭವನಾದ , ವೇದಗಳ ಸಾರವಾಗಿರುವ , ನಿರ್ವಿಕಾರನಾದ , ಸ್ಮಶಾನದಲ್ಲೇ ವಾಸಿಸುವ , ಮನದಲ್ಲಿ ಹುಟ್ಟುವ ಆಸೆಗಳನ್ನು ದಹಿಸುವ , ಶಿವ , ಶಂಕರ , ಶಂಭು , ಈಶಾನ ಎಂದು ಸ್ತುತಿಸಲ್ಪಡುವ ಈಶ್ವರನಿಗೆ ನನ್ನ ನಮನಗಳು..
ಸ್ವಯಂ ಯಃ ಪ್ರಭಾತೇ ನರಶ್ಶೂಲ ಪಾಣೇ ಪಠೇತ್ ಸ್ತೋತ್ರರತ್ನಂ ತ್ವಿಹಪ್ರಾಪ್ಯರತ್ನಮ್ | ಸುಪುತ್ರಂ ಸುಧಾನ್ಯಂ ಸುಮಿತ್ರಂ ಕಳತ್ರಂ ವಿಚಿತ್ರೈಸ್ಸಮಾರಾಧ್ಯ ಮೋಕ್ಷಂ ಪ್ರಯಾತಿ ||
ಯಾರು ಪ್ರತಿದಿನ ಮುಂಜಾನೆ ಈ ಸ್ತೋತ್ರವನ್ನು ಓದಿ ಶೂಲಪಾಣಿಯನ್ನು ಸ್ಮರಿಸುತ್ತಾರೋ , ಅವರಿಗೆ ಒಳ್ಳೆಯ ಸಂತತಿ , ಸಂಪತ್ತು , ಒಳ್ಳೆಯ ಮಿತ್ರರು , ಒಳ್ಳೆಯ ಸಂಗಾತಿ , ನೆಮ್ಮದಿಯ ಜೀವನ ಹಾಗೂ ಮೋಕ್ಷ ಸಿಗುತ್ತವೆ..
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್
*ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬