26/06/2023
ನೆಟ್ಟಗೆ ವಿರೋಧ ಪಕ್ಷವೂ ಆಗದೇ ಬಿಜೆಪಿಗೆ ಪರ್ಯಾಯ ಕೊಡುವ ಕನಸು ಕಾಣುವ ಕಾಂಗ್ರೆಸ್ಸಿಗೊಂದು ನೀತಿ ಪಾಠ
ಡಾ ಬಸವರಾಜ್ ಇಟ್ನಾಳ
ಕಾಂಗ್ರೆಸ್ಸು ಮತ್ತು ಬಿಜೆಪಿ ನಡುವೆ ವ್ಯತ್ಯಾಸ ಏನು ಗೊತ್ತಾ ? ಸಾಂಸ್ಕೃತಿಕ ಮತ್ತು ಧಾರ್ಮಿಕ ಒಮ್ಮತದ ಪಾಳೆಗಾರಿಕೆ ಮಾಡುವ ಪಕ್ಷ ಬಿಜೆಪಿ. ಕಾಂಗ್ರೆಸ್ಸು ಹುಂಬ ಅಂಧಾದುಂಧ್ ಪಾಳೆಗಾರಿಕೆ ಮಾಡುವವರ ಪಕ್ಷ. ಆದರೆ ಎರಡೂ ಕೂಡ ಪಾಳೇಗಾರಿಕೆಯನ್ನೇ ಮಾಡುತ್ತವೆ. ಅಷ್ಟೇ ಅಲ್ಲ ಭಾರತದ ಎಲ್ಲಾ ರಾಜಕೀಯ ಪಕ್ಷಗಳೂ ಪಾಳೇಗಾರಿಕೆಯನ್ನೇ ಮಾಡುತ್ತವೆ. ಯಾಕೆಂದರೆ ಒಂದು, ಭಾರತದ ರಾಜಕಾರಾಣ ಹುಟ್ಟಿದ್ದೇ ಪಾಳೇಗಾರಿಕೆ ಪರಂಪರೆಯಿಂದ. ಎರಡು, ಭಾರತೀಯ ಮೂಲಭೂತವಾಗಿ ಶರಣಾಗತಿ ಪ್ರಜ್ಞೆಯನ್ನು ಹೊಂದಿದ್ದಾನೆ. ಭಾರತೀಯರು ಧರ್ಮ ಮತ್ತು ದೇವರಿಗೆ ಬಹಳ ಬೇಗ ಶರಣು ಹೋಗುವುದರಿಂದ ಅದೇ ಪರಿಭಾಷೆಯಲ್ಲಿ ಈ ಸಮಾಜದ ವಿಧೇಯತಯನ್ನು ಪಡೆಯುವುದು ಬಹಳ ಸರಳ. ಕಳೆದ ಒಂದು ಶತಮಾನದಲ್ಲಿ ಎಷ್ಟೆಲ್ಲಾ ಸಾಮಾಜಿಕ ವೈಜ್ಞಾನಿಕ ಬೆಳೆವಣಿಗೆ ಆದಾಗ್ಯೂ ಕೂಡ ಫ್ರೀ ಬಸ್ ಸೌಕರ್ಯ ಸಿಕ್ಕ ಮೊದಲ ವಾರಾಂತ್ಯ ಬಂದೊಂಡನೆ ಇಲ್ಲಿನ ಬಡವ ಶ್ರೀಮಂತ ಮಧ್ಯಮವರ್ಗ ಮೇಲ್ಜಾತಿ ಕೆಳಜಾತಿ ಎಲ್ಲಾ ಮಹಿಳೆಯರೂ ಧರ್ಮಸ್ಥಳ ಕುಕ್ಕೆ ಇತ್ಯಾದಿ ದೇವಳಗಳಿಗೆ ಹೋಗುತ್ತಿರುವುದು ಈ ಧಾರ್ಮಿಕ ಶರಣಾಗತ ಮನಸ್ಥಿತಿಯ ಸಾಕ್ಷಿ. ಅಷ್ಟೇ ಅಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಗೌರಿಗದ್ದೆಗೆ ಹೋಗಿ ಒಬ್ಬ ಸಂಶಯಾಸ್ಪದ ಗುರೂಜಿ ನಡೆಸುವ ಹೋಮ ಹವನದಲ್ಲಿ ಭಾಗವಹಿಸಿ ಅಲ್ಲಿಂದಲೇ ಸರಕಾರದ ಪರವಾಗಿ ಮಾಧ್ಯಮ ಹೇಳಿಕೆ ಕೊಡುತ್ತಾರೆ. ಇದರ ಸರಿ ತಪ್ಪುಗಳ ಚರ್ಚೆ ಈಗ ಅಪ್ರಸ್ತುತ. ಭಾರತೀಯರ ಈ ಶರಣಾಗತ ಮನಸ್ಥಿತಿ ಕರೆಕ್ಟಾಗಿ ಗೊತ್ತಿದ್ದಿದ್ದು ಮಹಾತ್ಮಾ ಗಾಂಧಿಗೆ.
ಆದ್ದರಿಂದಲೇ ಬಾಪುವಿನ ಪ್ರತಿಯೊಂದು ಚಿಂತನೆ ನುಡಿ ನಡೆ ಎಲ್ಲವೂ ರಾಮ ಮತ್ತು ಭಾರತೀಯ ಧಾರ್ಮಿಕ ಅಂಶಗಳ ಸುತ್ತಲೇ ಇರುತ್ತಿತ್ತು. ಇದನ್ನು ಚೆನ್ನಾಗಿ ಅರಿತ ಹಿಂದುತ್ವವಾದಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪಾಳೆಗಾರಿಕೆಗೆ ಅನುಕೂಲವಾಗುವಂತೆ ಇದನ್ನೇ ವಿಕೃತಗೊಳಿಸಿಕೊಂಡು ರಾಮ ಕೃಷ್ಣ ಇತ್ಯಾದಿಗಳ ಮೂಲಕ ಮನುವಾದೀ ಪಾಳೇಗಾರಿಕೆಗೆ ( manuist oligarchy ಅನ್ನಬಹುದೇನೋ) ಕಳೆದ ಒಂದು ಶತಮಾನದಷ್ಟು ಕಾಲ ಶ್ರಮ ಪಟ್ಟು ಈ ದೇಶದ ಬಹುಸಂಖ್ಯಾತ ಪ್ರಜ್ಞೆಯನ್ನು ಅಣಿಗೊಳಿಸಿದ್ದಾರೆ. ಬಾಪುವಿನ ರಾಮ ಆತನನ್ನು ಮಹಾತ್ಮನನ್ನಾಗಿಸಿದರೆ ಹಿಂದುತ್ವವಾದಿಗಳ ರಾಮ ಇವರನ್ನು ಕೋಮುದ್ವೇಷಿಗಳನ್ನಾಗಿಸಿದೆ. ದುರಂತ ಏನೆಂದರೆ ಬಾಪುವಿನ ರಾಮ ಬಾಪುವಿನ ಜೊತೆಗೆ ಈ ಲೋಕದಿಂದ ಹೋಗಿಬಿಟ್ಟ.
ಕಳೆದ ಒಂದು ದಶಕದಲ್ಲಿ ಬಿಜೆಪಿಗೆ ಜಗತ್ತಿನ ಬಹುತೇಕ ಎಲ್ಲಾ ಬಂಡವಾಳಶಾಹಿಗಳ ಬೆಂಬಲ ಸಿಕ್ಕು ಭಾರತ ಮಾತ್ರ ಅಲ್ಲ ಇಡೀ ಜಗತ್ತಿನ ಪ್ರಕ್ಷುಬ್ಧತೆಯಲ್ಲಿ ಬಹು ಮುಖ್ಯ ಪಾತ್ರ ಹಿಂದುತ್ವವಾದಿ ಚಿಂತನೆ ವಹಿಸಲಿದೆ.
ನಾನು ಗಾಂಧೀ. ಸಾವರ್ಕರ್ ಅಲ್ಲ ಅಂತ ಹೇಳುವ ರಾಹುಲ್ ಗಾಂಧೀ, ಗಾಂಧೀ ಪ್ರಜ್ಞೆಯನ್ನು ಕಟ್ಟ ಕಡೆಯ ಹಳ್ಳಿಯ ಶಾಲಾಬಾಲಕನಿಗೆ ತಲುಪಿಸುವ ಯಾವ ಯೋಜನೆ ಹೊಂದಿಲ್ಲ. ಆದರೆ ಹಿಂದುತ್ವವಾದವನ್ನು ಅವರದೇ ಭಾಷೆಯಲ್ಲಿ ಅವರರವರ ನುಡಿಕಟ್ಟಿನಲ್ಲಿ ಹೇಳಲು ಹಳ್ಳಿ ಹಳ್ಳಿಯಲ್ಲಿ ಸಂಘದ ಶಾಖೆಗಳಿವೆ. ಜೊತೆಗೆ ಗಾಂಧೀ ಎಂಬ ಹೆಸರೇ ಒಂದು ಬಯ್ಗುಳ ಎಂಬ ಅಭಿಪ್ರಾಯವನ್ನೂ ಇದೇ ಸಂಘ ರೂಪಿಸಿದೆ. ದ್ವೇಷದ ಅಂಗಡಿ ಬಂದ್ ಆಗಿವೆ ಅಂತ ಹೇಳುವ ರಾಹುಲ್ ಗಾಂಧೀಗೆ ಗೊತ್ತಿರಲಿ ಈ ದೇಶದಲ್ಲಿ ಪ್ರತಿ ವರ್ಷ ಶಾಖೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ -ಕಾಂಗ್ರೆಸ್ ಸರಕಾರ ಇರುವ ರಾಜ್ಯಗಳಲ್ಲಿ ಕೂಡ. ದ್ವೇಷದ ಅಂಗಡಿ ಮುಚ್ಚುವುದು ನಿಮಗೆ ಕಷ್ಟವೇ ? ಸರಿ. ಪ್ರೇಮದ ಬಜಾರು ಎಲ್ಲಿ ತೆರೆದಿದಿದ್ದೀರಿ, ಜನಾಂಗೀಯ ಪ್ರೇಮವನ್ನು ಹೆಚ್ಚಿಸುವಂತ ಯಾವ ಪದಾರ್ಥಗಳನ್ನು ಅಲ್ಲಿ ಹಂಚುತ್ತಿದ್ದೀರಿ ಅದನ್ನಾದರೂ ಹೇಳಬೇಕಲ್ಲ ?
ಗಾಂಧೀ ವರ್ಸಸ್ ಬ್ರಿಟಿಷ್ ವಸಾಹತುವಾದ, ಗಾಂಧೀ ವರ್ಸಸ್ ಅಸ್ಪೃಶ್ಯತೆ, ಗಾಂಧೀ ವರ್ಸಸ್ ಕೋಮುವಾದ ಆಗಿದ್ದ ಚರ್ಚೆ ಈಗ ಗಾಂಧೀ ವರ್ಸಸ್ ಸಾವರ್ಕರ್ ಆಗಿದೆ. ಸಾವರ್ಕರ್ ಪಕ್ಷದ ಇಂದಿನ ಅಗಾಧ ಜನಪ್ರಿಯತೆಗೆ ಗಾಂಧೀ ಪಕ್ಷ ಕೂಡ ಜವಾಬ್ದಾರಿ ತಗೆದುಕೊಳ್ಳಬೇಕಾಗುತ್ತದೆ. ತಗೊಂಡಿದ್ದೀರಾ ರಾಹುಲ್ ಗಾಂಧೀಜಿ ? ಕೇವಲ ತಮ್ಮ ತಮ್ಮ ಅಧಿಕಾರ ಮೂಲಗಳನ್ನು ಮಾತ್ರ ಗಟ್ಟಿ ಗೊಳಿಸಿಕೊಳ್ಳುವ ತುರ್ತಿನ ಚುನಾವಣಾ ರಾಜಕಾರಣದಲ್ಲಿ ನಿರತವಾದ ಕಾಂಗ್ರೆಸ್ಸಿನ ದಿಗ್ಗಜ ನಾಯಕರುಗಳಿಗೆ ಈ ದೇಶದ ಬೇರುಮಟ್ಟದಲ್ಲಿ ನಡೆದುಹೋದ ಪ್ರಜ್ಞೆಯ ಪಲ್ಲಟದ ಬಗ್ಗೆ ಅರಿವಾದರೂ ಇದೆಯೇ ? ಈ ಪ್ರಜ್ಞೆಯ ಪಲ್ಲಟವನ್ನು ಅಡ್ರೆಸ್ ಮಾಡದೇ ನೀವು ಈ ದೇಶದ ಚುಕ್ಕಾಣಿ ಹಿಡಿಯುವುದು ಸಾಧ್ಯವೇ ?
ಹಾಗೆ ನೋಡಿದರೆ ಈ ಸಾಮಾಜಿಕ ಪ್ರಜ್ಞೆಯ ಪಲ್ಲಟಗಳನ್ನು ನೆಹರೂವಿನ ಕಾಲದಿಂದಲೂ ಕಾಂಗ್ರೆಸ್ಸು ಅಲಕ್ಷ್ಯ ಮಾಡುತ್ತಲೇ ಬಂದಿದೆ. ಆದ್ದರಿಂದಲೇ ನೆಹರುವಿನ ಮೊದಲ ಸರಕಾರಕ್ಕಿದ್ದ 45 ಪರ್ಸೆಂಟ್ ಮತದಾರರ ಬೆಂಬಲ ಇಂದಿರಾ ಗಾಂಧಿ ಹತ್ಯೆಯ ನಂತರದ ಚುನಾವಣೆಯಲ್ಲಿ ಒಂದೇ ಒಂದು ಸಾರಿ 48ಕ್ಕೆ ಹೆಚ್ಚಿದ್ದು ಬಿಟ್ಟರೆ ಸತತ ಇಳಿಯುತ್ತಲೇ ಬಂದಿದೆ. ಇದೀಗ ಹತ್ತೊಂಬತ್ತು ವರೆ ಪರ್ಸೆಂಟ್ ಕಾಂಗ್ರೆಸ್ಸಿನ ರಾಷ್ಟ್ರೀಯ ವೋಟ್ ಶೇರ್. ನೆಹರು ಅವರ ಮೂರೂ ಸರಕಾರಗಳಿಗೆ ಪ್ರಬಲ ವಿರೋಧ ಪಕ್ಷ ಅಂತ ಇದ್ದಿದ್ದು ಕಮ್ಯುನಿಸ್ಟ್ ಪಾರ್ಟಿ. ಜಾತಿ ಧರ್ಮ ಸಂಘರ್ಷಗಳನ್ನು ಅಷ್ಟಾಗಿ ಪರಿಗಣಸದ ಕಮುನಿಸ್ಟ್ ಪಕ್ಷ ಕೇವಲ ವರ್ಗ ಸಂಘರ್ಷದ ಚಿಂತನೆಯ ಪಾರ್ಟಿ ಆಗಿದ್ದರಿಂದಲೋ ಅಥವಾ ಸಮಾಜವಾದಿ ಚಿಂತನೆ ಎಲ್ಲ ಕಡೆ ನಡೆಯುತ್ತಿದುರಿಂದ ಹಿಂದುತ್ವವಾದಿ ಚಿಂತನೆಯೇ ಅಷ್ಟಾಗಿ ಜನಪ್ರಿಯ ಆಗದಿದ್ದರಿಂದಲೋ ನೆಹರು ಸರಕಾರ ಹಿಂದುತ್ವವಾದಿಗಳನ್ನು ಅಷ್ಟಾಗಿ ಗಂಭೀರವಾಗಿ ತಗೆದುಕೊಳ್ಳಲಿಲ್ಲ. ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮತ್ತು ನಂಬೂದರಿಪಾದ್ ಗಳ ಜೊತೆ ಏಗುವುದೇ ಅವಾಗ ಆದ್ಯತೆ ಆಗಿದ್ದರೂ ಸರಿ.
ನೆಹರು ಮತ್ತು ಶಾಸ್ತ್ರೀಜಿ ಸಾವಿನ ನಂತರ ಬಂದ ಮುಂದಿನ ಚುನಾವಣೆಯಲ್ಲಿ ಎಂಬತ್ತಮೂರು ಸೀಟುಗಳನ್ನು ಕಳೆದುಕೊಂಡರೂ ಬಹುಮತ ಗಳಿಸಿದ ಕಾಂಗ್ರೆಸ್ಸಿನ ಅಧ್ಯಕ್ಷ ಕೆ ಕಾಮರಾಜ್ ತಾನೇ ಪ್ರಧಾನಿ ಆಗುವ ಅವಕಾಶ ಇದ್ದರೂ ಆತ ಪ್ರಧಾನಿ ಹುದ್ದೆಗೆ ಕೂರಿಸಿದ್ದು ಇಂದಿರಾ ಗಾಂಧಿಯನ್ನು. ಎರಡು ವರ್ಷಗಳ ಹಿಂದೆಯೂ ನೆಹರು ಸಾವಿನ ನಂತರ ಸಹ ತನಗೆ ಬಂದ ಅವಕಾಶ ಬಿಟ್ಟು ಲಾಲ್ ಬಹಾದೂರ್ ಶಾಸ್ತ್ರಿಯನ್ನು ಪ್ರಧಾನಿ ಮಾಡಿದ್ದು ಇದೇ ಕಾಮರಾಜ್. ನೆಹರುವಿನ ಏಕಾಧಿಪತ್ಯವನ್ನು ವಿರೋಧಿಸಲು ಸಿ ರಾಜಗೋಪಾಲಾಚಾರಿ ಕಟ್ಟಿದ್ದ ಸ್ವತಂತ್ರ ಪಾರ್ಟಿ ಇಂದಿರಾ ಸರಕಾರದ ಪ್ರಮುಖ ವಿರೋಧ ಪಕ್ಷ. ಕಾಂಗ್ರೆಸ್ಸು ಎಂಬತ್ಮೂರು ಸೀಟುಗಳನ್ನು ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಲು ಹೊರಟ ಕಾಮರಾಜ್, ನಿಜಲಿಂಗಪ್ಪ, ಮೊರಾರ್ಜಿ ದೇಸಾಯಿ, ನೀಲಂ ಸಂಜೀವ್ ರೆಡ್ಡಿ, ವೀರೇಂದ್ರ ಪಾಟೀಲ್ ಇತ್ಯಾದಿಗಳನ್ನು ತಾನು ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಹೊರಗೆ ಹಾಕಿ ಕಾಂಗ್ರೆಸ್ ಐ ಮಾಡಿಕೊಂಡ ಇಂದಿರಾ ಬಹುಷಃ ಕಾಂಗ್ರೆಸ್ಸಿನ ಹಣೆಬರಹವನ್ನೇ ಬದಲಿಸಿದರೆನೋ. ಯಾಕೆಂದರೆ ಮುಂದಿನ ಕೆಲ ವರ್ಷಗಳ ಕಾಲ ಈ ಹಿರಿಯರೊಡನೆ ಇಂದಿರಾ ಹಟಕ್ಕೆ ಬಿದ್ದ ಪರಿಣಾಮವೇ ಎಮೆರ್ಜೆನ್ಸಿ. ಕಾಂಗ್ರೆಸ್ ವಿರೋಧಿ ಅಲೆ ಗಟ್ಟಿಯಾಗಿ ಭಾರತದಲ್ಲಿ ನೆಲೆಯೂರಲು ಇದೇ ಕಾರಣವಾಗಿ ಶತಾಯ ಗತಾಯ ಅಧಿಕಾರ ಹಿಡಿಯುವುದೇ ಕಾಂಗ್ರೆಸ್ಸಿನ ಗುಣವಾಗಿ, ಇಂದಿರಾ ಸರಕಾರದ ಪ್ರಮುಖ ವಿರೋಧ ಪಕ್ಷವಾಗಿದ್ದ ಸ್ವತಂತ್ರ ಪಾರ್ಟಿ ಮುಂದೆ ಲೋಕದಳದೊಂದಿಗೆ ವಿಲೀನವಾಗಿ ನಂತರ ಲೋಕದಳ ಜನತಾ ಪಾರ್ಟಿಯೊಂದಿಗೆ ವಿಲೀನವಾಯಿತು. ಈ ಜನತಾ ಪಾರ್ಟಿ ಮೂಲಕ ಜನಸಂಘದ ಸಹವಾಸಕ್ಕೆ ಬಿದ್ದ ಸಂಸ್ಥಾ ಕಾಂಗ್ರೆಸ್ಸಿಗರೂ, ಕಮ್ಯುನಿಸ್ಟರೂ, ಸಮಾಜವಾದಿಗಳೂ ಎಲ್ಲರ ಪ್ರಥಮ ಆದ್ಯತೆ ಅಧಿಕಾರ ವ್ಯಸನಕ್ಕೆ ಬಿದ್ದ ಕಾಂಗ್ರೆಸ್ ವಿರೋಧಿ ಪ್ರಜ್ಞೆಯನ್ನು ರೂಪಿಸುವುದೇ ಆಯಿತು. ಸಂಸ್ಥಾ ಕಾಂಗ್ರೆಸ್ಸಿನ ವೀರೇಂದ್ರ ಪಾಟೀಲ್ ನಂತರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಇಂದಿರಾ ಕಾಂಗ್ರೆಸ್ಸಿನ ಅರಸು ಆಹ್ವಾನದ ಮೇರೆಗೆ ರೋಲ್ ಕಾಲ್ ರೌಡಿಗಳು, ಗಲ್ಲಿಯ ಗೂಂಡಾಗಳು ಕೂಡ ರಾಜಕೀಯಕ್ಕೆ ಬಂದಿದ್ದು ಕಾಂಗ್ರೆಸ್ ವಿರೋಧಿ ಅಲೆಯನ್ನು ಇನ್ನಷ್ಟು ಸುಗಮಗೊಳಿಸಿತು. ಇಂದಿರಾ ಗಾಂಧಿ ಸಲುಹಿದ ಈ ಗುಂಡಾಗಿರಿ ಹೇಗಿತ್ತೆಂದರೆ ಎಮೆರ್ಜೆನ್ಸಿ ನಂತರ ಬಂದ ಮೊರಾರ್ಜಿ ಸರಕಾರ ಇಂದಿರಾ ಗಾಂಧೀ ಬಂಧನ ಮಾಡಿದ್ದಾಗ ಡಿಸೆಂಬರ್ ಎಪ್ಪತ್ತಂಟರಲ್ಲಿ ಭೋಲಾನಾಥ್ ಪಾಂಡೇ ಮತ್ತು ದೇವೇಂದ್ರ ಪಾಂಡೇ ಎಂಬ ಸ್ನೇಹಿತರಿಬ್ಬರು ನೂರಾ ಮೂವತ್ತೆರಡು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಇಂದಿರಾ ಬಿಡುಗಡೆಗೆ ಒತ್ತಾಯಿಸುವಷ್ಟು ! ಇದಕ್ಕೆ ಬಹುಮಾನವಾಗಿ ನಂತರದ ಚುನಾವಣೆಯಲ್ಲಿ ಇಬ್ಬರಿಗೂ ಇಂದಿರಾ ಉತ್ತರ ಪ್ರದೇಶದ ವಿಧಾನ ಸಭಾ ಟಿಕೇಟು ಕೊಡುವಷ್ಟು ! ಕಾಂಗ್ರೆಸ್ ವಿರೋಧಿ ನೆಲೆಗಟ್ಟನ್ನು ಇಂದಿರಾಜಿ ಗಟ್ಟಿ ಗೊಳಿಸಿದ್ದು ಹೀಗೆ. ದ್ರಾವಿಡ ಪಕ್ಷಗಳನ್ನು ಹೊರತು ಪಡಿಸಿದಂತೆ ಈ ಕಾಂಗ್ರೆಸ್ ವಿರೋಧಿ ಪ್ರಜ್ಞೆಯನ್ನು ಕಟ್ಟುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಾಲವನ್ನು ಎಲ್ಲಾ ಕಾಂಗ್ರೆಸ್ ವಿರೋಧಿ ಪಕ್ಷಗಳು ಬಳಸಿಕೊಂಡಿವೆ.
ಇದೆಲ್ಲದರಿಂದ ಹುಟ್ಟಿದ ರಾಜಕೀಯ ಅಸುರಕ್ಷತೆಯೇ ಮುಂದೆ ರಾಜೀವ್ ಗಾಂಧಿಯನ್ನು ಶಾ ಬಾನೋ ಕೇಸಿನಲ್ಲಿ ಎಡವಟ್ಟು ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಹಾಗೆಯೇ ಬಾಬ್ರಿ ಮಸೀದಿಯಲ್ಲಿ ರಾಮನ ಪೂಜೆಗೂ ಅನುಮತಿ ಕೊಡಲು ಪ್ರೇರೇಪಿಸುತ್ತದೆ. ಕೇವಲ ಆರು ವರ್ಷಗಳ ಹಿಂದಷ್ಟೇ ರಾಮ ಜನ್ಮ ಭೂಮಿಯ ಪ್ರಮುಖ ಉದ್ದೇಶ ಇಟ್ಟುಕೊಂಡು ಹುಟ್ಟಿದ ಬಿಜೆಪಿಗೆ ರಾಜೀವ್ ಸರಕಾರದ ಈ ಎಡಬಿಡಂಗಿ ನಡೆ ಅಗಾಧ ರಾಜಕೀಯ ಅವಕಾಶಗಳನ್ನು ತೋರಿದ್ದು ಮತ್ತು ಹಾಗೆಯೇ ಮುಂದೆ ಎಲ್ಲವೂ ನಡೆದು ಹೋಗಿದ್ದು ಈಗ ಇತಿಹಾಸ. ಮುಂದಿನ ದಿನಗಳಲ್ಲಿ ಮುಂದುವರಿದ ಕಾಂಗ್ರೆಸ್ ವಿರೋಧಿ ಚಿಂತನೆಯಿಂದಲೇ ಬಹುಜನ್ ಸಮಾಜ ಪಾರ್ಟಿ, ಅಸ್ಸಾಂ ಗಣ ಪರಿಷದ್, ತೆಲಗು ದೇಸಂ ಪಾರ್ಟಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಇತ್ಯಾದಿ ಪ್ರಾದೇಶಿಕ ಪಕ್ಷಗಳೂ ಹುಟ್ಟಿದವು. ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರವನ್ನೂ ಹಿಡಿದವು. ಇತರ ಪಕ್ಷಗಳು ಕಾಂಗ್ರೆಸ್ಸನ್ನು ಸೋಲಿಸಲು ಸಹಾಯವನ್ನೂ ಮಾಡಿದವು.
ಇದ್ಯಾವುದಕ್ಕೂ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡೇ ಇಲ್ಲ. ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ಪ್ರಾಯಶ್ಚಿತ್ತ ಮತ್ತು ಸುಧಾರಣೆಯ ಮಾತು ! ಕಳೆದ ಮೂವತ್ತು ವರ್ಷಗಳಲ್ಲಿ ಕಾಂಗ್ರೆಸ್ಸು ಅಂತರಂಗದಲ್ಲಿ ತನ್ನೊಳಗಿನ ಪಾಳೆಗಾರಿಕೆ ಮತ್ತು ಅಧಿಕಾರ ದಾಹಿ ಪೈಪೋಟಿ ಗೊಂದಲಗಳು ಮತ್ತು ಬಹಿರಂಗದಲ್ಲಿ ರಾಜಕೀಯ ವಿರೋಧಿ ಹಿಂದುತ್ವವಾದಿ ಚಿಂತನೆ ಎರಡನ್ನೂ ಸಮರ್ಥವಾಗಿ ಎದುರಿಸಲಾಗದ ಕಾರಣ ಇವತ್ತಿನ ಬಹುಸಂಖ್ಯಾತ ಸಮುದಾಯ ಮತ್ತು ಇಡೀ ಮಾಧ್ಯಮ ಕಾಂಗ್ರೆಸ್ ವಿರೋಧಿ ಧೋರಣೆ ಹೊಂದಿದೆ. ಇಂದು ಕಾಂಗ್ರೆಸ್ಸಿಗೆ ಮಾಧ್ಯಮವೇ ಪ್ರಮುಖ ವಿರೋಧ ಪಕ್ಷ.
ಇದನ್ನೆಲ್ಲಾ ನಿಭಾಯಿಸಿ ರಾಹುಲ್ ಗಾಂಧಿ ಕಾಂಗ್ರೆಸ್ಸಿಗೆ ಪುನಶ್ಚೇತನ ತರಬಲ್ಲರೆ? ಹೋಗಲಿ ಇಂದಿನ ಅಂದರೆ 5G ಟೆಕ್ನಾಲಜಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜೊತೆಗೇ ತೀವ್ರ ಧರ್ಮಾಂಧತೆ ಮತ್ತು ಕೋಮು ದ್ವೇಷ ತುಂಬಿಕೊಂಡ ಜಮಾನದ ಕಾಂಗ್ರೆಸ್ ರಾಜಕಾರಣ ಹೇಗೆ ಇರಬೇಕು ಎಂಬ ಕಲ್ಪನೆ ಇದೆಯೇ? ಹಿಂದುತ್ವಕ್ಕಿಂತ ಬಹುತ್ವ ಮುಖ್ಯ ಎಂಬ ವೈಚಾರಿಕತೆಯನ್ನು ಬೆಳೆಸಲು ಯಾವ ಮಾರ್ಗೋಪಾಯಗಳನ್ನು ಹುಡುಕಿದ್ದಾರೆ ಕಾಂಗ್ರೆಸ್ಸಿನ ಇಂದಿನ ಕರ್ನಾಟಕದ ಕಲಿಗಳು ? ಧರ್ಮಕ್ಕಿಂತ ವಿಜ್ಞಾನ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಈ ದೇಶದ ಕಟ್ಟ ಕಡೆಯ ಪ್ರಜೆಗೆ ಮನದಟ್ಟು ಮಾಡಲು ನಿಮ್ಮ ಬಳಿ ಇರುವ ಮಾಧ್ಯಮ ಸಾಧನಗಳಾದರೂ ಯಾವುವು ? ಮುಖ್ಯ ಪ್ರಶ್ನೆ ನಿಮ್ಮ ಇಂದಿನ ರಾಜಕೀಯ ಸರಕು ಏನು ?
ಅಥವಾ ಪ್ರಶಾಂತ್ ಕಿಶೋರ್ ತರದ ಕ್ಯಾಂಪೇನ್ ಮೇನೇಜರ್ ಗಳೇ ನಿಮಗೆ ರಾಜನೀತಿಜ್ಞರ ಕಾಣುತ್ತಿದ್ದಾರ ? ರಾಜಕೀಯ ಬಂಡವಾಳವೇ ಇಲ್ಲದಾಗ ಏನು ಕ್ಯಾಂಪೇನ್ ಮಾಡಿ ಏನು ಪ್ರಯೋಜನ ?
ಇತ್ತೀಚಿನ ಚುನಾವಣಾ ಕಾಲದಲ್ಲಿ ಅಲ್ಲಲ್ಲಿ ಸಿದ್ದರಾಮಯ್ಯ ಹೇಳುತ್ತಿದ್ದುದು ನೆನಪಿದೆಯೇ? `ಹೇ ನಾವು ಸುಮ್ಮನೆ ಇದ್ರೂ ಗೆಲ್ತೀವ್ರಿ. ಬಿಜೆಪಿ ಆಡಳಿತದಿಂದ ಅಷ್ಟು ಜನ ಬೇಸತ್ತಿದ್ದಾರೆ,’ ಅಂತ. ಇದು ಹೆಚ್ಚೂ ಕಡಿಮೆ ಕಾಂಗ್ರೆಸ್ಸಿನ ರಣತಂತ್ರದ ಒಟ್ಟಾರೆ ಸಾರ. ತಮ್ಮ ಸಕಾರಾತ್ಮಕ ಮತ್ತು ಸಕಾಲಿಕೆ ರಾಜಕೀಯ ಕ್ರಿಯಾಯೋಜನೆ ಮತ್ತು ಸಾಮಾಜಿಕ ಚಿಂತನೆಗಳ ಜನಪ್ರಿಯತೆಯಿಂದಾಗಿ ಅಲ್ಲ, ಬಿಜೆಪಿ ಆಡಳಿತದಿಂದ ಬೇಸತ್ತು ಜನ ಇವರಿಗೆ ಓಟು ಕೊಡಬೇಕು ಅಷ್ಟೇ. ಇವರುಗಳ ಧೋರಣೆ ಯಾವಾಗಿನಿಂದಲೂ ಹೇಗೆ ಇದೆ ಅಂದರೆ, ಜನ ಇಂದಲ್ಲ ನಾಳೆ ವಿರೋಧ ಪಕ್ಷಗಳಿಂದ ಬೇಸತ್ತು ರೋಸಿ ಹೋಗುತ್ತಾರೆ. ಅವಾಗ ಅವರು ನಮಗೆ ವೋಟು ಹಾಕುತ್ತಾರೆ. ನಮ್ಮದು ಅತ್ಯಂತ ಹಿರಿಯ ಪಕ್ಷ ಅನ್ನುವ ಉಡಾಫೆ, ಬೌದ್ಧಿಕ ಸೋಮಾರಿತನ, ನಿಷ್ಕ್ರಿಯತೆ ಎಲ್ಲಾ ಸೇರಿದ ಜಡತ್ವ . ಇಂದಿನ ಹಿಂದುತ್ವವಾದಿ ಚಿಂತನೆಗೆ ಇವರ ಬಳಿ ಯಾವುದೇ ಪರ್ಯಾಯ ಇಲ್ಲ. ಹಿಂದುತ್ವವಾದಿ ಮತ್ತು ರಾಷ್ತೀಯವಾದಿ ಮಾಧ್ಯಮಗಳಿಗೆ ಪ್ರತಿ ದ್ವಂದಿ ಆಗಿ ನಿಲ್ಲಬಲ್ಲಂತ ಸಂವಿಧಾನವಾದಿ, ವೈಜ್ಞಾನಿಕ ಚಿಂತನೆಯ, ವಸ್ತು ನಿಷ್ಠ ಮಾಧ್ಯಮವೂ ಇವರಿಗೆ ಬೇಡ. ತನ್ನ ಎಡವಟ್ಟುಗಳ ಕಾರಣದಿಂದಲೇ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳ ಜೊತೆಗೆ ಹಿರಿಯಣ್ಣನ ಧೋರಣೆ ಬಿಟ್ಟು ಒಂದು ಹೊಂದಾಣಿಕೆ ಕೂಡ ಇಲ್ಲ.
ಹಿಂದುತ್ವ ಚಿಂತನೆಗೆ ಪರ್ಯಾಯ ರಾಜಕೀಯ ಚಿಂತನೆ ಇಲ್ಲ ಅಷ್ಟೇ ಅಲ್ಲ ಪರ್ಯಾಯ ಕೊಡಬಲ್ಲ ಚಿಂತಕರಿದ್ದರೂ ಅವರಿಗೆ ಬೆಲೆ ಇಲ್ಲ. ಹೀಗಾಗಿ ಹಿಂದುತ್ವಕ್ಕೆ ಒಂದು ಪ್ರಬಲ ಪರ್ಯಾಯ ನೆರೆಟಿವ್ ಇಲ್ಲ. ತಮ್ಮ ನಿಲುವು, ಸಬೂಬುಗಳನ್ನಾದರೂ ಯಾವುದೇ ಲೇಪ ಇಲ್ಲದೇ ಜನಕ್ಕೆ ತಲುಪಿಸಬಲ್ಲ ಮೀಡಿಯಾ ಪ್ಲಾನ್ ಕೂಡ ಇಲ್ಲ ! ಇದರಿಂದ ಏನಾಗಿದೆ ಅಂದರೆ ಹಿಂದುತ್ವಕ್ಕೆ ಪರ್ಯಾಯ ಎಂದರೆ ಇವರುಗಳೇ ಹಿಂದುತ್ವ ಚಿಂತನೆ ಮತ್ತು ಚಿಂತಕರನ್ನು ಹಿಂದುತ್ವಪರ ಮೀಡಿಯಾಗಳಲ್ಲಿ ಅಟ್ಯಾಕ್ ಮಾಡುತ್ತಾ ತಿರುಗುವುದು ಅಂದುಕೊಂಡಿದ್ದಾರೆ. ಇದರ ಜೊತೆ ಜೊತೆಗೇ ಹೊಸದಾಗಿ ಸ್ಪೀಕರ್ ಆದ ತಕ್ಷಣ ಯು ಟಿ ಖಾದರ್ ಶ್ರೀ ಶ್ರೀ ರವಿಶಂಕರ್, ವೀರೇಂದ್ರ ಹೆಗ್ಗಡೆ, ತರದ ಹಿಂದುತ್ವ ಇಕಾನುಗಳ ಸನ್ನಿಧಿಗೆ ಹೋಗಿ ಫೋಟೋ ತಗೆಸಿಕೊಂಡು ಜನ್ಮ ಪಾವನವಾದಂತೆ ಪೋಸು ಕೊಡುವ ಇನ್ನೊಂದು ಅತಿರೇಕ ಇದಕ್ಕೆ ಪರ್ಯಾಯ ಅಂದುಕೊಂದಂತಿದೆ. ಹಿಂದುತ್ವವಾದಿ ಮೀಡಿಯಾಗಳಿಗೆ ಇದು ಇನ್ನು ಒಳ್ಳೆಯ ಮಸಾಲೆಯಾಗಿ ಇವರೇ ಇದರಲ್ಲಿ ಬೆಂದು ಹೋಗುವುವುದು ಇವರಿಗೆ ಕಾಣುವುದಿಲ್ಲ.
ನೆಲ ಮಟ್ಟದಲ್ಲಿ ಸಂವಿಧಾನ ಪ್ರಜ್ಞೆಯನ್ನು ರೂಪಿಸುವ ಸಂಘಟನೆಯ ಹೊಳಹುಗಳೇ ಇಲ್ಲ. ಸಮೂಹದ ರಾಜಕೀಯ ಚಿಂತನೆಯನ್ನು ರೂಪಿಸುವ ಪರ್ಯಾಯ ಮಾಧ್ಯಮಗಳ ಬೆಳೆಸುವ ಯೋಚನೆಯೇ ಇಲ್ಲ. ಯಾಕೆಂದರೆ ಇದಕ್ಕೆ ಸಾವಿರಾರು ಕೋಟಿ ದುಡ್ಡು ಖರ್ಚಾಗುತ್ತದೆ ಅಷ್ಟೇ ಅಲ್ಲ ಬಹಳ ಮುಖ್ಯವಾಗಿ ತಮ್ಮ ಅಹಮಿಕೆ ಬಿಟ್ಟು ಬೇರೆ ಚಿಂತಕರ ಮೇಲೆ ನಂಬಿಗೆ ಇಡಬೇಕಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಒಂದು ದೂರಗಾಮಿ ಕಮಿಟ್ ಮೆಂಟ್ ಬೇಕಾಗುತ್ತದೆ.
ಆದರೆ ಕಾಂಗ್ರೆಸ್ ನಾಯಕರುಗಳಿಗೆ `ನಾನು’ ಅಂದರೆ I ಮುಖ್ಯವಾಗಿದೆ. ಲಿಂಗಾಯತ ಧರ್ಮ ಚಳುವಳಿ ಆಗಬೇಕಾ, ಸರಕಾರದಲ್ಲಿ ಕುಳಿತ ಮಂತ್ರಿ ಆಗಿದ್ದರೂ ನಾನೇ ನಾಯಕ. ಹಿಂದುತ್ವ ಚಿಂತಕರನ್ನು ಎದುರಿಸಬೇಕಾ, ಸರಿ ನಾನೇ ಅದಕ್ಕೂ ಸೈ, ಪುಡಿ ಕಾರ್ಯಕರ್ತರ ಪ್ರಚಾರಕ ಟೀಕೆಯನ್ನು ಎದುರಿಸಬೇಕಾ, ಸರಿ ನಾವೇಇದ್ದೀವಲ್ಲ ಅನ್ನೋ ಹುಂಬ ಕಾಂಗ್ರೆಸ್ಸಿಗರಿಗೆ ವೈಚಾರಿಕ ನಾಯಕತ್ವ ಬೇರೆ ರಾಜಕೀಯ ನಾಯಕತ್ವ ಬೇರೆ ಎಂಬ ಅರಿವೇ ಇಲ್ಲ. ಆದ್ದರಿಂದಲೇ ಇವರ ಬಳಿ ಒಂದು intellectual activist ಗಳ ಪಡೆ ಇಲ್ಲ. ಅಲ್ಲಿ ಇಲ್ಲಿ ಚದುರಿಂದಂತೆ ಇರುವ ಕೆಲವೇ ಕೆಲ ಬುದ್ಧಿ ಜೀವಿಗಳೋ ಒಬ್ಬ ನಿರ್ದಿಷ್ಟ ನಾಯಕನ ಅಂತಃಪುರ ಗಾಯಕರು..
ಇದು ಒಂದು ರಾಜಕೀಯ ತಂತ್ರವೇ ಅಲ್ಲ. ಹೀಗಾಗಿ ಈ ಹಳೇ ಕೆಲಸಕ್ಕೆ ಬಾರದ ಹತಾರುಗಳಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಡೆದ 37.6 ಪರ್ಸೆಂಟ್ ವೋಟುಗಳಲ್ಲಿ ಒಂದೇ ಒಂದು ವೋಟು ಅಲ್ಲಾಡಿಸಲಾಗದು. ಗ್ಯಾರಂಟಿ ಸ್ಕೀಮುಗಳು ಜಾತಿ ಸಮೀಕರಣ ಎಲ್ಲಾ ಮಾಡಿಯೂ ಕೂಡ ಕರ್ನಾಟಕದ ಕಾಂಗ್ರೆಸ್ಸು ಬಿಜೆಪಿ ವೋಟ್ ಶೇರನ್ನು ಕಡಿಮೆ ಮಾಡಲು ಆಗಿಲ್ಲ. ಕಾಂಗ್ರೆಸ್ಸು ಗೆದ್ದಿದ್ದು `ಜಾತ್ಯಾತೀತ’ ಜನತಾದಳದ ವೋಟ್ ಶೇರ್ ಕಡಿಮೆ ಮಾಡಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಸ್ಕೀಮುಗಳು ರಾಷ್ಟ್ರ ಮಟ್ಟದಲ್ಲಿ ಅಷ್ಟಾಗಿ ಕೆಲಸ ಮಾಡಲಾರವು. ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಸಧ್ಯದ ಅತ್ಯಂತ ದೊಡ್ಡ ರಾಷ್ಟ್ರೀಯ ಪ್ರಶ್ನೆ `ಮೋದಿ ಬಿಟ್ಟರೆ ಇನ್ನಾರು ? ’ ಒಂದು ಪಾರ್ಲಿಮೆಂಟರಿ ಡೆಮಾಕ್ರಸಿಯಲ್ಲಿ ಇದು ಸರಿಯಾದ ಪ್ರಶ್ನೆ ಹೌದೋ ಅಲ್ಲವೋ ಬೇರೆ ವಿಚಾರ ಆದರೆ ಈ ದೇಶದ ಪ್ರಜ್ಞೆಯಲ್ಲಿ ಈ ಪ್ರಶ್ನೆಯನ್ನು ಹುಟ್ಟಿಸಲಾಗಿದೆ ಮತ್ತು ಇದನ್ನು ಎದುರಿಸಲು ಕಾಂಗ್ರೆಸ್ಸಿನ ಬಳಿ ಯಾವ ಹತಾರವೂ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ 37.6 ಪರ್ಸೆಂಟ್ ವೋಟುಗಳಲ್ಲಿ ಹತ್ತು ಹದಿನೈದು ಪರ್ಸೆಂಟ್ ಆದರೂ ಕಾಂಗ್ರೆಸ್ಸು ಸೆಳೆಯದಿದ್ದರೆ ಮತ್ತೆ ಮೋದಿಯೇ ದಿಕ್ಕು.
ಈ ಪವಾಡ ನಡೆದೀತೆ? ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಪರಿಹಾರವೂ ಅಲ್ಲಿಂದಲೇ ಹೊಮ್ಮುತ್ತದೆ ಅನ್ನುತ್ತಾರೆ. ಸರಿ ಮೂಲದಲ್ಲಿ ಸಮಸ್ಯೆ ಏನು? ಬಿಜೆಪಿಯ 37.6 ಪರ್ಸೆಂಟ್ ವೋಟು, ಪ್ರಜ್ಞೆಯ ವೋಟು. ಮೊದಲೇ ಹೇಳಿದಂತೆ ಸಂಘ ಇಲ್ಲಿ ಒಂದು ಶತಮಾನ ಕಾಲ ನಡೆಸಿದ ಪ್ರಜ್ಞೆಯ ಪಲ್ಲಟದ ಚಳುವಳಿಯ ಫಲ. ಮತ್ತು ಈ ಪ್ರಜ್ಞೆಯ ಮೂಲ ಹಿಂದುತ್ವ. ಮೋದಿ ಮೇಲಿನ ಪ್ರೀತಿಯ ಪ್ರೇರಣೆ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ದ್ವೇಷ. ಬಹುತ್ವದ ಬಗೆಗಿನ ಅಸಡ್ಡೆ ಈ ಪ್ರಜ್ಞೆಯ ಪ್ರಮುಖ ಲಕ್ಷಣ.
ಆದ್ದರಿಂದ ಇಲ್ಲಿ ಬಹುತ್ವ ನಂಬುಗೆಯ ಮಾನವ ಪ್ರೇಮದ ಪ್ರಜ್ಞೆಯ ಚಳುವಳಿ ನಡೆಯಬೇಕಾಗಿದೆ. ಟಿವಿ ಸ್ಟುಡಿಯೋಗಳಲ್ಲಿ, ಪತ್ರಿಕಾ ಬರಹಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರವಲ್ಲ ಗಲ್ಲಿ ಗಲ್ಲಿಯಲ್ಲಿ ಪ್ರತಿ ಹಳ್ಳಿಯ ಅರಳಿಕಟ್ಟೆಯಲ್ಲಿ ನಡೆಯಬೇಕಾಗಿದೆ. ಇದನ್ನು ಮಾಡಬಲ್ಲ ಚಿಂತಕರು, ಬರಹಗಾರರು, ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್ ಗಳು ಹಾಗೂ ಪ್ರತಿಯೊಬ್ಬ ಪ್ರಜ್ಞೆಯ ಕಾರ್ಯಕರ್ತನನ್ನು (intellectual activists) ಗುರುತಿಸಿ ಅವರ ಬೆನ್ನಿಗೆ ನಿಲ್ಲಬೇಕಾಗುತ್ತದೆ. ನಾನು ರಾಹುಲ್ ಗಾಂಧೀ ನಾನೇ ಇದರ ಮುಂದಾಳು, ನಾನು ಸಿದ್ದರಾಮಯ್ಯ, ನಾನು ಡಿಕೆಶಿವಕುಮಾರ್, ನಾನು ಎಂ ಬಿ ಪಾಟೀಲ್ ನಾವೇ ಇದರ ಮುಂಚೂಣಿ ನಾಯಕರು ಅಂತ ಮುಂದೆ ಬಂದರೆ ಮತ್ತದೇ ವಾಡಿಕೆಯ anti-congressism ಕಟಕಿಗಳಿಗೆ ಬಲಿಯಾಗಿ, ಕಾಂಗ್ರೆಸ್ಸಿನ ಹಳೇ ಪಾಪಗಳ ಸಬೂಬು ಹೇಳುವಷ್ಟರಲ್ಲೇ ಸುಸ್ತಾಗಿ ಈಗಿರುವ 19.49 ಪೆರ್ಸೆಂಟ್ ಉಳಿಸಿಕೊಳ್ಳುವುದೇ ಹರಸಾಹಸವಾಗಿ ಬಿಡುತ್ತದೆ.
ಮಾಡಬೇಕಿರುವುದು ಇಷ್ಟೇ. ಇಲ್ಲಿನ ಎಲ್ಲಾ ಸಮಾಜವಾದಿ ಸೆಕುಲರ್ ಮತ್ತು ಸಂವಿಧಾನವಾದಿ ಚಿಂತಕರ ಮತ್ತು ಬರಹಗಾರರ ಬಳಗವನ್ನು ಪೋಷಿಸಿ. ಇವರ ಬೆನ್ನಿಗೆ ನಿಲ್ಲುವಂತ ಮೀಡಿಯಾ ಜಾಗಗಳನ್ನು ಸೃಷ್ಟಿಸಿ. ಪ್ರಿಂಟ್, ಟಿವಿ ಮತ್ತು ಸೋಶಿಯಲ್ ಮೀಡಿಯಾ ಎಲ್ಲವೂ ಈಗ ಖುಲ್ಲಂ ಖುಲ್ಲಾ ವ್ಯಾಪಾರ. ಲೀಗಲ್ ಕೂಡ. ತನ್ನ ಪ್ರಚಾರ ಮಶಿನರಿಗೆ ಸಾವಿರಾರು ಕೋಟಿ ರೂಪಾಯಿ ಮಟ್ಟದ ಮೀಡಿಯಾ ವ್ಯಾಪಾರ ಮಾಡುತ್ತದೆ ಬಿಜೆಪಿ. ನೀವ್ಯಾಕೆ ಮಾಡಬಾರದು? ಒಂದು ಸಮ್ಯಕ್ ಮಿಡಿಯಾ ಪ್ಲಾನಿನೊಂದಿಗೆ ಈ ಸೆಕುಲರ್ ಚಿಂತರನ್ನು ಪ್ರಚಾರಕ್ಕೆ ತನ್ನಿ. ಬಾಪುವನ್ನು ಮತ್ತೆ ಈ ದೇಶದ ಹೀರೋ ಮಾಡಿ. ಚಿಂತನೆ, ಚಿಂತಕ, ಪ್ರಜ್ಞಾವಂತಿಕೆ ಪ್ರಚಾರವಾಗಲಿ. ನೀವು ನೀವೇ ಪ್ರಚಾರಕ್ಕೆ ಬರಬೇಡಿ. ನೀವು ಬಂದರೆ ಮತ್ತದೇ ಕಾಂಗ್ರೆಸ್ ವರ್ಸಸ್ ಬಿಜೆಪಿ ಆಗಿ ಎಲ್ಲವೂ ನಷ್ಟಗೊಳ್ಳುತ್ತದೆ. Invest in the intellect of the country, not just electoral rhetoric. Not in your own leadership. ಹಿಂದುತ್ವ ರಾಜಾಕಾರಣದ ಮೇಲೆ ಕೇವಲ ಅಟ್ಯಾಕ್ ಮಾಡುವುದು ಮಾತ್ರ ಸಾಲದು ಅದಕ್ಕೆ ಪರ್ಯಾಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಹೊಳಹು ಕೊಟ್ಟು ಇಪ್ಪತ್ತು ಇಪ್ಪತ್ತೈದು ಪರ್ಸೆಂಟ್ ಕಟ್ಟಾ ಬಿಜೆಪಿ ಮತದಾರರ ಪ್ರಜ್ಞೆಯನ್ನು ಹಿಂದುತ್ವದಿಂದ ವಿಮುಖ ಗೊಳಿಸಿದರೆ ಸಾಕು, ಈ ದೇಶದ ಬಹುತ್ವ ಸೇಫ್. ಈ ಬಹುತ್ವದಲ್ಲಿ ಮಾತ್ರ ಕಾಂಗ್ರೆಸಿಗೆ ರಾಜಕೀಯ ಅವಕಾಶ ಇರಲು ಸಾಧ್ಯ.
ಸಾಂಕೇತಿಕವಾಗಿ ಹೇಳಬೇಕೆಂದರೆ ಇಂದಿರಾ ಅವರ ಕಾಂಗ್ರೆಸ್ I, ಬಾಪುವಿನ ಕಾಂಗ್ರೆಸ್ We ಆಗಬೇಕು.