04/10/2020
ಇಲ್ಲಿ ಪವರ್ ಟಿವಿ ಪ್ರಸಾರ ಮಾಡಿದ್ದು ಸುಳ್ಳೋ, ಸತ್ಯವೋ ಆಮೇಲೆ...
ಮೇಲ್ನೋಟಕ್ಕೆ ಸಿಎಂ ಪುತ್ರನ ಮೇಲಿರುವ ಆರೋಪ ಸರಿಯೇ ಎನ್ನುವುದು ಭಾಸವಾಗುತ್ತಿದೆ. ಕಾರಣ, ಒಂದು ವೇಳೆ ಪವರ್ ಟಿವಿ ಇಲ್ಲಸಲ್ಲದ ಆರೋಪಗಳನ್ನು ಸಿಎಂ ಪುತ್ರನ ಮೇಲೆ ಹೊರಿಸಿದ್ದಾಗಿದ್ದಲ್ಲಿ ಮಾಧ್ಯಮದ ಮೇಲೆ ಇಷ್ಟೊಂದು ನಾಟಕೀಯ ಡೊಂಬರಾಟ ಮಾಡುತ್ತಿರಲಿಲ್ಲ. ನೇರವಾಗಿ ಕಾನೂನಿನ ಮೊರೆ ಹೋಗಿ, ಆರೋಪ ಸುಳ್ಳು ಎಂಬುದನ್ನು ಸಾಬೀತುಪಡಿಸಬಹುದಿತ್ತು.
ಆದರೆ, ಇಲ್ಲಿ ನಡೆದಿದ್ದು ಆಡಳಿತದ ದುರಹಂಕಾರ ಎನ್ನುವುದು ಸ್ಪಷ್ಟ. ಏಕಾಏಕಿ ಮಾಧ್ಯಮವನ್ನು ನಿಲ್ಲಿಸಿ, ಕಛೇರಿ ಮತ್ತು ಎಂಡಿ ಮನೆಯ ಮೇಲೆ ಪೋಲಿಸ್ ದಾಳಿ ನಡೆಸಿ, ಸುಮಾರು 250 ರಷ್ಟು ಸಿಬ್ಬಂದಿಗಳನ್ನು ಬೀದಿಗೆ ತಂದು, ಒಬ್ಬ ಭ್ರಷ್ಟಾಚಾರಿಯನ್ನು ಸಂರಕ್ಷಿಸುವುದಕ್ಕಾಗಿ ಪಣತೊಟ್ಟಿದ್ದಾರೆ.
ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಂಡು, ಸರ್ವಾಧಿಕಾರ ಧೋರಣೆಯೊಂದಿಗೆ ತನ್ನ ಮಗನನ್ನು ರಕ್ಷಿಸಲು ಮುಖ್ಯಮಂತ್ರಿ ಪ್ರಯತ್ನಿಸುತ್ತಿರುವಂತಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಆಡಳಿತದ ವಿರುದ್ಧ ಧ್ವನಿಯೆತ್ತುವವರ ಸದ್ದಡಗಿಸುವ ಬಿಜೆಪಿ ಕುತಂತ್ರ ಇಲ್ಲೂ ಮುಂದುವರಿದಿದೆ.
ಇದರಿಂದ ಪವರ್ ಟಿವಿ ಇನ್ನಷ್ಟು ಪ್ರಚಾರಗೊಂಡಿದೆಯೇ ವಿನಃ ಯಾವುದೇ ಹಿನ್ನಡೆಯಾಗಿಲ್ಲ. ಕರ್ನಾಟಕದ ಜನತೆ ಪೂರಾ ಪವರ್ ಟಿವಿ ಜೊತೆ ನಿಂತಿದ್ದಾರೆ. ನ್ಯಾಯಯುತ ತನಿಖೆ ನಡೆಸುವ ಬದಲು ಬಾಯಿ ಮುಚ್ಚಿಸಲು ವಕ್ರದಾರಿ ಹಿಡಿದಾಗ ಆ ಧ್ವನಿಗೆ ಶಕ್ತಿ ಹೆಚ್ಚಿದೆಯೇ ಹೊರತು ಸರಕಾರದ ಲೆಕ್ಕಾಚಾರದಂತೆ ಸದ್ದು ನಿಂತಿಲ್ಲ.
'ನೇರ, ದಿಟ್ಟ, ನಿರಂತರ', 'ಯಾರ ಆಸ್ತಿಯೂ ಅಲ್ಲ' ಎಬಿತ್ಯಾದಿ ಟ್ಯಾಗ್ ಲೈನ್ ಜೊತೆಗೆ ಬರೀ ಸುಳ್ಳುಗಳನ್ನೇ ಉಗುಳುವ ಪುಡಾರಿ ಮಾಧ್ಯಮಗಳಿಗೆ ತನ್ನದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಧ್ವನಿಯೆತ್ತಲು ನಾಲಗೆ ಹೊರಡುವುದಿಲ್ಲ. ಅವರೆಲ್ಲ, ಬೂಟು ನೆಕ್ಕುತ್ತಾ ಬದುಕುವವರು. ಇವಕ್ಕೆ ಭಿನ್ನವಾಗಿ ಪವರ್ ಟಿವಿ ಭ್ರಷ್ಟಾಚಾರವನ್ನು ಪ್ರಶ್ನಿಸಿದಾಗ ಧ್ವನಿಯನ್ನು ಮಟ್ಟಹಾಕುವಲ್ಲಿ ಕುತಂತ್ರ ಹೂಡುತ್ತಿದ್ದಾರೆ..
ಪವರ್ ಟಿವಿ ಜೊತೆ ಬೆಂಬಲವಾಗಿ ನಾವಿದ್ದಲ್ಲಿ,
ಸತ್ಯ ಮತ್ತು ವಸ್ತುನಿಷ್ಠ ಸುದ್ದಿಗಳೊಂದಿಗೆ ಪವರ್ ಟಿವಿ ನಮ್ಮ ಜೊತೆಗಿರಬಹುದು ಎಂಬ ಭರವಸೆಯಿದೆ...