07/06/2012
ಸಿಇಟಿ ಶ್ರೇಯಾಂಕ ಪ್ರಕಟ: ಬೆಂಗಳೂರಿಗೆ ಸಿಂಹಪಾಲು
June 07, 2012
ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಒಟ್ಟು 80,932 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಲ್ಲಿ ಈ ಬಾರಿಯೂ ಮೊದಲ ರ‌್ಯಾಂಕ್ ಬೆಂಗಳೂರು ವಿದ್ಯಾರ್ಥಿಗಳ ಪಾಲಾಗಿದೆ.
ನಾಲ್ಕೂ ವಿಭಾಗಗಳಲ್ಲಿ ಮೊದಲ ಹತ್ತು ರ‌್ಯಾಂಕ್‌ಗಳನ್ನು ಗಣನೆಗೆ ತೆಗೆದುಕೊಂಡರೆ, ಒಟ್ಟು 40 ರ‌್ಯಾಂಕ್‌ಗಳಲ್ಲಿ 22 ರ‌್ಯಾಂಕ್‌ಗಳನ್ನು ರಾಜಧಾನಿಯ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ವಾಸ್ತುಶಿಲ್ಪ ವಿಭಾಗದಲ್ಲಿ ಮೊದಲ ಹತ್ತು ರ‌್ಯಾಂಕ್‌ಗಳ ಪೈಕಿ ಎಂಟನ್ನು ಬೆಂಗಳೂರು ವಿದ್ಯಾರ್ಥಿಗಳು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ನಗರದ ಎಚ್‌ಎಎಲ್‌ನ ನ್ಯಾಷನಲ್ ಪಬ್ಲಿಕ್ ಶಾಲೆಯ ಅರ್ಚನಾ ಶಶಿ ವೈದ್ಯಕೀಯ/ದಂತ ವೈದ್ಯಕೀಯದಲ್ಲಿ ಮೊದಲ ರ‌್ಯಾಂಕ್ ಹಾಗೂ ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಮೂರನೇ ರ‌್ಯಾಂಕ್ ಗಳಿಸಿದ್ದಾರೆ.
ಮೈಸೂರಿನ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎನ್.ಪ್ರೀತೇಶ್‌ಕುಮಾರ್ ವೈದ್ಯಕೀಯ/ ದಂತ ವೈದ್ಯಕೀಯ ವಿಭಾಗದಲ್ಲಿ ಎರಡನೇ ರ‌್ಯಾಂಕ್, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಮೊದಲ ರ‌್ಯಾಂಕ್, ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಎಲ್.ಎಂ.ವೀರೇಶ್ ವೈದ್ಯಕೀಯ/ದಂತ ವೈದ್ಯಕೀಯ ವಿಭಾಗದಲ್ಲಿ ಮೂರನೇ ರ‌್ಯಾಂಕ್ ಪಡೆದಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ಮಲ್ಲೇಶ್ವರದ ಎಂಇಎಸ್ ಕಿಶೋರ ಕೇಂದ್ರದ ಎಂ.ದೀಪಾ ಪ್ರಥಮ ರ‌್ಯಾಂಕ್, ಬಳ್ಳಾರಿ ನಗರದ ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಜ್ ವಿ.ಜೈನ್ ಎರಡನೇ ರ‌್ಯಾಂಕ್, ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಗರ್ ಹೊನ್ನುಂಗರ ಮೂರನೇ ರ‌್ಯಾಂಕ್ ಗಳಿಸಿದ್ದಾರೆ.
ವಾಸ್ತುಶಿಲ್ಪ ವಿಭಾಗದಲ್ಲಿ ನಗರದ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ಎಸ್.ನಕ್ಷಾ ಮೊದಲ ರ‌್ಯಾಂಕ್, ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂನ ಎಸ್. ಪವನ್‌ಕುಮಾರ್ ದ್ವಿತೀಯ ರ‌್ಯಾಂಕ್, ನ್ಯಾಷನಲ್ ಹಿಲ್‌ವ್ಯೆ ಪಬ್ಲಿಕ್ ಶಾಲೆಯ ಪೃಥ್ವಿ ಹೆಗಡೆ ತೃತೀಯ ರ‌್ಯಾಂಕ್ ಗಳಿಸಿದ್ದಾರೆ.
ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ಚಂದನ ಆಚಾರ್ಯ ತೃತೀಯ ರ‌್ಯಾಂಕ್ ಪಡೆದಿದ್ದಾರೆ. ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಬುಧವಾರ ಪ್ರಕಟಿಸಿದರು.
ಜುಲೈ 23ರಿಂದ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಯಾವ ಕಾಲೇಜು, ಕೋರ್ಸ್‌ಗಳಲ್ಲಿ ಎಷ್ಟು ಸೀಟುಗಳು ಇವೆ ಎಂಬುದು ಸೀಟು ಹಂಚಿಕೆ ಪಟ್ಟಿ ಪ್ರಕಟವಾದ ನಂತರವೇ ಗೊತ್ತಾಗಲಿದೆ.
ಜುಲೈ ಎರಡನೇ ವಾರದಲ್ಲಿ ಸೀಟು ಹಂಚಿಕೆ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಆನ್‌ಲೈನ್ ಕೌನ್ಸೆಲಿಂಗ್ ಬಗ್ಗೆ ಮಾಹಿತಿ ನೀಡುವ ಸಿ.ಡಿ.ಯನ್ನು ಸಹಾಯವಾಣಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು.
ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳಿಗೆ 15,776 (13,666), ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 78,694 (73,242), ಆರ್ಕಿಟೆಕ್ಟರ್ ಕೋರ್ಸ್‌ಗೆ 836 (815) ಹಾಗೂ ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ಕೋರ್ಸ್‌ಗೆ 59,011(55,682) ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ (ಆವರಣದಲ್ಲಿ ಕಳೆದ ಸಾಲಿನಲ್ಲಿ ಅರ್ಹತೆ ಪಡೆದಿದ್ದ ವಿದ್ಯಾರ್ಥಿಗಳ ಸಂಖ್ಯೆ ನೀಡಲಾಗಿದೆ).
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ವಿಭಾಗದಲ್ಲಿ ಅರ್ಹತೆ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಎಂಜಿನಿಯರಿಂಗ್‌ನಲ್ಲಿ ಖಾಲಿ ಉಳಿಯುವ ಸೀಟುಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಆದರೆ, ಉಳಿದ ಕೋರ್ಸ್‌ಗಳಲ್ಲಿ ಸೀಟಿಗಾಗಿ ಪೈಪೋಟಿ ಹೆಚ್ಚಾಗಲಿದೆ.
ಮೇ 21, 22ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಒಟ್ಟು 1,20,945 ವಿದ್ಯಾರ್ಥಿಗಳ ಪೈಕಿ 1,18,780 ಅಭ್ಯರ್ಥಿಗಳು ಹಾಜರಾಗಿದ್ದರು. ವೆಬ್‌ಸೈಟ್‌ನಲ್ಲಿ ಸಿಇಟಿ ಫಲಿತಾಂಶ ಲಭ್ಯವಿದ್ದು, ಗುರುವಾರ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳ ಪರಿಶೀಲನೆಗಾಗಿ ಸ್ಕ್ಯಾನ್ ಮಾಡಿದ ಎಲ್ಲ ಒ.ಎಂ.ಆರ್ ಉತ್ತರ ಪತ್ರಿಕೆಗಳ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಫಲಿತಾಂಶ ತಡೆಹಿಡಿದಿರುವ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಪ್ರತಿಯನ್ನು ಪ್ರಾಧಿಕಾರಕ್ಕೆ ಇ-ಮೇಲ್, ಅಂಚೆ ಅಥವಾ ಫ್ಯಾಕ್ಸ್ ಮೂಲಕ ಜೂನ್ 8ರ ನಂತರ ಸಲ್ಲಿಸಿ ರ‌್ಯಾಂಕ್ ಪಡೆಯಬಹುದಾಗಿದೆ.
ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದಲ್ಲಿ ಅಂಕಗಳು ವ್ಯತ್ಯಾಸವಾದರೆ, ಆ ಅಂಕಗಳ ಆಧಾರದ ಮೇಲೆ ಹೊಸ ರ‌್ಯಾಂಕ್ ನೀಡಲಾಗುತ್ತದೆ.
ಆನ್‌ಲೈನ್ ಕೌನ್ಸೆಲಿಂಗ್: ಈ ವರ್ಷದಿಂದ ಆನ್‌ಲೈನ್ ಕೌನ್ಸೆಲಿಂಗ್ ಜಾರಿಗೆ ಬಂದಿದೆ. ಹೀಗಾಗಿ ಅಭ್ಯರ್ಥಿಗಳು ಸೀಟು ಆಯ್ಕೆಗಾಗಿ ಕೌನ್ಸೆಲಿಂಗ್ ಕೇಂದ್ರಗಳಿಗೆ ಅಲೆಯುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತು, ಸೈಬರ್ ಕೆಫೆಗಳಿಗೆ ತೆರಳಿ ಸೀಟು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಜುಲೈ 15ರ ಒಳಗೆ ಸೀಟು ಹಂಚಿಕೆ ಪಟ್ಟಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಜುಲೈ 10ರ ಒಳಗೆ ಸೀಟು ಹಂಚಿಕೆ ಪಟ್ಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ರಾಮದಾಸ್ ತಿಳಿಸಿದರು.
ಈ ತಿಂಗಳ ಮೂರನೇ ವಾರದಲ್ಲಿ ನವದೆಹಲಿಗೆ ತೆರಳಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿ ಸೀಟು ಹಂಚಿಕೆ ಪಟ್ಟಿಯನ್ನು ಜುಲೈ 10ರ ಒಳಗೆ ನೀಡುವಂತೆ ಕೋರಲಾಗುವುದು ಎಂದರು.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಜಿ.ಎಸ್.ವೆಂಕಟೇಶ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿ.ರಶ್ಮಿ, ಆಡಳಿತಾಧಿಕಾರಿ ಕೆ.ಜ್ಯೋತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.