27/05/2024
ಮಲ್ಲಿಕಾರ್ಜುನ ಹೊಸಪಾಳ್ಯ
ವಿಜಯನಗರ ಅರಸರ ಕಾಲದಲ್ಲಿ ತುಂಗಭದ್ರಾ ನದಿಯಿಂದ ನೀರು ಪಡೆಯಲು ನಿರ್ಮಾಣವಾದ ಹತ್ತಾರು ಕಾಲುವೆಗಳ ಪೈಕಿ ‘ರಾಯ’ ಹೆಸರಿನ ಕಾಲುವೆಯ ವೈಭವವೇ ಬೇರೆ. ಅದರ ಉದ್ದ, ಸಾಗುವ ಮಾರ್ಗ, ಹಠಾತ್ ತಿರುವುಗಳು ಚಕಿತಗೊಳಿಸುತ್ತವೆ. 600 ವರ್ಷಗಳ ಹಿಂದಿನ ನೀರಾವರಿ ಕಾಲುವೆ ತಂತ್ರಜ್ಞಾನದ ಉತ್ಕೃಷ್ಟ ಉದಾಹರಣೆ.
ಹಂಪಿಯಲ್ಲಿ ವೈವಿಧ್ಯಮಯ ಜಲಮೂಲಗಳು, ನೀರಿನ ರಚನೆಗಳು, ಅಣೆಕಟ್ಟುಗಳು, ಕಾಲುವೆಗಳು ಹೆಜ್ಜೆಹೆಜ್ಜೆಗೂ ಕಂಡುಬರುತ್ತವೆ. ಮಹಾನವಮಿ ದಿಬ್ಬದ ಬಳಿಯ ಮೆಟ್ಟಿಲು ಕಲ್ಯಾಣಿ, ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿರುವ ಮನ್ಮಥ ಹೊಂಡ, ಕೃಷ್ಣ ದೇವಾಲಯದ ಮುಂದಿನ ಬಾಲಕೃಷ್ಣ ಹೊಂಡ, ವಿಜಯ ವಿಠಲ ದೇವಾಲಯಕ್ಕೆ ಹೋಗುವ ಹಾದಿಯ ಅಕ್ಕಪಕ್ಕ ಹಲವಾರು ಕಲ್ಯಾಣಿಗಳು, ಕಲ್ಲಿನ ಮೇಲ್ಕಾಲುವೆ, ಕೂಪಾರಾಮ ವಾಟಿಕೆ, ರಾಣಿ ಸ್ನಾನಗೃಹ, ಅಷ್ಟಕೋನದ ಈಜುಕೊಳ, ಸಾರ್ವಜನಿಕ ಈಜುಕೊಳ ಇತ್ಯಾದಿ ರಚನೆಗಳಿವೆ.
ಇವುಗಳ ಜೊತೆಗೆ ಆ ಕಾಲದ ಕಾಲುವೆ ನೀರಾವರಿ ವ್ಯವಸ್ಥೆ ಇಂದಿಗೂ ಬಳಕೆಯಾಗುತ್ತಿದೆ. ತುಂಗಾಭದ್ರಾ ನದಿಗೆ ಹೊಸಪೇಟೆಯಿಂದ ರಾಯಚೂರಿನ ಬಿಚ್ಚಾಲಿಯವರೆಗೆ ಚಿಕ್ಕಚಿಕ್ಕ ಅಣೆಕಟ್ಟುಗಳನ್ನು ನಿರ್ಮಿಸಿ ಕಾಲುವೆಗಳ ಮೂಲಕ ನೀರು ಪಡೆಯಲಾಗುತ್ತಿತ್ತು. ಇವುಗಳಲ್ಲಿ ಹೆಚ್ಚಿನವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿವೆ. ಒಂದು ಎಕರೆಯೂ ಮುಳುಗಡೆಯಾಗದಂತೆ ಅಣೆಕಟ್ಟೆಗಳನ್ನು ಹಾಕಿ ಸುಮಾರು 11 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಜಾಣ್ಮೆ ಇದು.