11/03/2021
ಬದಲಿಸಿದಂತಿದೆ ತೂಸು ಬಸ್‌ನ ಸಹವಾಸ ಮತ್ತು ಒಡನಾಟ
- ಭುವನಾ ಮಹಾಲಿಂಗಪುರ
ಬೆಂಗಳೂರಿನಂತಹ ಸಿಟಿಗಳಲ್ಲಿ ಬಸ್ಳಗಲ್ಲಿ ಓಡಾಡೋದು ಯಾರಿಗೇ ತಾನೇ ಇಷ್ಟ ಆಗತ್ತೇ ಹೇಳಿ, ಅದರಲ್ಲೂ ಯಾವದಾದ್ರು ಮುಖ್ಯ ಸಮಾರಂಭಗಳಿಗೆ ಸರಿಯಾದ ಟೈಮ್ಗೆ ಹೋಗ್ತಿನಿ ಅಂತಾ ಅಂದುಕೊಂಡರೆ ಮುಗಿದೇ ಹೋಯ್ತು, ಅದು ಈ ದಟ್ಟ ಟ್ರಾಫಿಕ್ನಲ್ಲಿ ಆಗದೇ ಇರೋ ಅಸಾಧ್ಯ ಕೆಲಸ ಅಂತಾನೇ ಹೇಳಬಹುದು.
ಹೌದು, ಬಸ್ಗಳಲ್ಲಿ ಓಡಾಡೋದು ಅಷ್ಟು ಸುಲಭದ ಕೆಲಸವಲ್ಲ, ಯಾಕಂದ್ರೆ ತುಂಬಾ ಜನರಿಗೆ ಯಾವ ಬಸ್ ಎಲ್ಲಿ ಹೋಗುತ್ತೆ? ಯಾವ ಸಂಖ್ಯೆಯ ಬಸ್ ಹತ್ತಿದ್ರೆ ನಾವು ಹೋಗಬೇಕಾದ ನಗರ ತಲುಪುತ್ತೀವಿ? ಅನ್ನೋದೆ ಸರಿಯಾಗಿ ಗೋತ್ತಿರಲ್ಲ.
ಬಸ್ ಸ್ಟಾಪ್‌ನ ಅವ್ಯವಸ್ಥೆ...!
ಕೆಲವೊಂದು ಬಾರಿ ಬಸ್ ಬರೋ ಮುಂಚೆ ನಾವು ಹೋಗಿ ನಿಂತಿದ್ರು ಬಸ್ ಬರಲ್ಲ, ಇನ್ನು ಬಸ್ಗಾಗಿ ಆ ಸುಡು ಬಿಸಿಲಿನಲ್ಲಿ ಕಾಯೋದು ತುಂಬಾ ಕಷ್ಟ. ಅಲ್ಲಿ ಕುಳಿತುಕೊಳ್ಳಲು ಜಾಗ ಇಲ್ಲದಿದ್ರೆ, ಗುರುತು ಪರಿಚಯ ಇಲ್ಲದಿರೋ ಜನಗಳ ಮಧ್ಯದಲ್ಲಿ ನಿಂತುಕೊಂಡು ಬಸ್ಗಾಗಿ ಕಾಯುವ ಸ್ಥಿತಿ ಯಾರಿಗೆ ಬೇಕು ಹೇಳಿ...
ಅಕ್ಕ ಪಕ್ಕದಲ್ಲಿ ನಿಂತಕೊಂಡಿರುವವರನ್ನು ಏನಾದ್ರು ಕೇಳೋಣಾ... ಮಾತಾಡೋಣ ಅಂದ್ಕೊಂಡ್ರೆ, ಅವರು ಆಲ್ರೆಡಿ ಪೋನ್ನಲ್ಲಿ ಬ್ಯುಸಿ ಇರ್ತಾರೆ. ಕಣ್ಣಿಗೆ ಕಾಣದಿರುವ ವಯರ್ಲೆಸ್ ಬ್ಲೂ-ಟುತ್ ಅನ್ನು ಹಾಕಿಕೊಂಡು ನಿಂತಕೊಂಡಿದ್ದರೆ, ನಮ್ಮನ್ನೇ ಏನೋ ಕೇಳುತ್ತಿರಬಹುದು ಎಂದು ಅಂದುಕೊಂಡು ಮಾತನಾಡಿದ್ರೆ ಕಾಮಿಡಿ ಪೀಸ್ ಆಗೋದರಲ್ಲಿ ಡೌಟೇ.... ಇಲ್ಲಾ.
ಇನ್ನು ನಿಂತು ನಿಂತು ಕಾಲುಗಳು ನೋವು ಬರೋ ಸಮಯಕ್ಕೆ, ಅಲ್ಲಿ ಯಾರೋ ಎದ್ದು ಹೋದ ಸ್ಥಳದಲ್ಲಿ ಕುಳಿತು ಎರಡು ನಿಮಿಷ ಕಳೆದಿರುವುದಿಲ್ಲ, ಅಷ್ಟರಲ್ಲಿ ನಾವು ಹೋಗಬೇಕಿರುವ ಬಸ್... ಬಸ್ಸ್ಟಾಪ್ಗೆ ಬಂದಿರುತ್ತೆ ನೋಡಿ….
ಇನ್ನು ಬಸ್ ಹತ್ತೋವಾಗ...!
ಆದ್ರೆ ಬಸ್ ಖಾಲಿ ಇದ್ರೇ ಪರವಾಗಿಲ್ಲ, ಅದು ಏನಾದ್ರು ತುಂಬಿ ಇನ್ನು ನಾವು ಹತ್ತೋ ಬಸ್ಸ್ಟಾಪ್ನಲ್ಲಿ ಜನ ನಾ ಮುಂದೆ ತಾ ಮುಂದೆ ಎಂದು ಒಬ್ಬೋರನ್ನೊಬ್ಬರು ತಳ್ಳಿ ಹತ್ತಿದರಂತು ಅಲ್ಲಿಗೆ ನಮ್ಮ ಕಥೆ ಅರ್ಧ ಮುಗಿದೇ ಹೋದಂಗೆ. ಆ... ಘಳಿಗೆ ಮಾತ್ರ ನಾಳೆಯಿಂದ ನಾನು ಬಸ್ನಲ್ಲಿ ಹೋಗದೆ ಇಲ್ಲ ಅನ್ನೋ ರೇಂಜ್ಗೆ ಜಿಗುಪ್ಸೆ ಬಂದ್ಬಿಡುತ್ತೆ. ಅದಲ್ಲದೇ, ಶೇಕೆಡಾ ಐವತ್ತುರಷ್ಟು ಜನಕ್ಕೆ ಬೈಕೋ, ಕಾರೋ, ಆಟೋದಲ್ಲಿ ಹೋಗೋದು ಬೆಟರ್ ಅಂತಾ ಅನಿಸೋದಂತು ಗ್ಯಾರಂಟಿ.
ನಿದ್ರೆ ಬರಿಸುವ ಸಿಗ್ನಲ್ … !
ಬಸ್ ಹೊರಡುವ ಮುಂಚೆನೇ ತುಂಬಾ ಜನಕ್ಕೆ, ಅವರವರ ದಿನನಿತ್ಯದ ಕೆಲಸಕಾರ್ಯಗಳಿಗೆ ಸ್ವಲ್ಪ ಯಾವಾಗಲೂ ಲೇಟ್ ಆಗಿರತ್ತೆ, ಇನ್ನು ಬಸ್ನಲ್ಲಿ ಪದೇ ಪದೇ ರೆಡ್ ಸಿಗ್ನಲ್ಗಳು ಸಿಕ್ಕರೆ, ಅಯ್ಯೋ ನಾನು ಹೋಗುವ ಟೈಮ್ನಲ್ಲೇ ಈ ಸಿಗ್ನಲ್ ಬೀಳಬೇಕಾ, ಅಲ್ರೆಡಿ ಲೇಟ್ ಆಗಿದೆ ಅಂತಾ ಮನಸ್ಸಿನಲ್ಲಿ ಗೋಣಗಾಡತ್ತಾ ಮತ್ತೆ ಮತ್ತೆ ಟೈಮ್ ನೋಡೋ ಜನರು ಒಂದು ಕಡೆಯಾದರೆ, ಈ ಬಸ್ಗಳಲ್ಲಿ ಅದರಲ್ಲೂ ನಮ್ಮನ್ನು ಯಾರದ್ರು ಕಾಯತ್ತಾ ಇದ್ದರೆ ‘ಹಾ... ಹತ್ತೇ ನಿಮಿಷ ಲಾಸ್ಟ್ ಸ್ಟಾಪ್ನಲ್ಲಿ ಇದಿನಿ, ಬಂದೇ ಬಂದೇ’ ಅಂತಾ ಸುಳ್ಳಿನ ಸುರಿಮಳೆ ಪೋನಲ್ಲಿ ಇನ್ನೊಂದು ಕಡೆ. ಇದರಿಂದ ಶಾಲೆ, ಕಾಲೇಜು, ಆಪೀಸ್ಗಳಲ್ಲಿ ಟೈಮ್ಸೆನ್ಸ್ ಇಲ್ಲಾ ದಿನಾಲು ಲೇಟ ಅಂತಾ ಹೇಳಿದ್ರೇ ಥಟ್ ಅಂತ ನೆನಪಿಗೆ ಬರುವ ಉತ್ತರವೇ ನಾನು ಬರೋ ನಗರದಲ್ಲಿ ಬಸ್ಸೇ ಬರಲ್ಲ, ಇಲ್ವಾ ಇವತ್ತು ಟ್ರಾಫಿಕ್ ತುಂಬಾನೇ ಇತ್ತು ಅನ್ನೋ ಡೈಲಾಗ್ ಅಂತ ಕನ್ಫರ್ಮ್.
ಕಿಟಕಿ ಸೀಟಿನ ಗಲಾಟೆ...!
ಬಸ್ನಲ್ಲಿ ಕಿಟಕಿ ಪಕ್ಕದ ಸೀಟ್ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು-ಮೆಚ್ಚು. ಯಾರಿಗೆಲ್ಲಾ ಬಸ್ನಲ್ಲಿ ಓಡಾಡೋಕೆ ಇಷ್ಟ ಇರುವುದಿಲ್ಲ ಅವರಿಗೆಲ್ಲಾ ಕಿಟಕಿ ಸೀಟು ಸಿಕ್ಕಿದರೆ ಮಾತ್ರ ಬಸ್ನಲ್ಲಿ ಓಡಾಡೋದು ಚೆನ್ನಾಗಿದೆ ಸುಮ್ಮನೆ ನಾನು ದಿನಾಲು ಪೆಟ್ರೋಲ್ ಹಣ ವೇಸ್ಟ್ ಮಾಡ್ತಿದ್ದೆ ಅನ್ನೋ ಭಾವನೆ ಬರುತ್ತೆ ಬೇಗ ಏಳುವ ಅಭ್ಯಾಸ ಇರುವವರಿಗೆ ಕಿಟಕಿಯನ್ನು ನೋಡುತ್ತಾ ನಿದ್ದೆಗೆ ಜಾರಿರುತ್ತಾರೆ. ಕೆಲವರು ಸೀರೆ ಬಟ್ಟೆ ಅಂಗಡಿಯಲ್ಲಿ ಯಾವ ಬಟ್ಟೆ ಚೆನ್ನಾಗಿದೆ ಯಾವ ಹೋಟೆಲ್ ಗ್ರಾಂಡ್ ಆಗಿದೆ ಅನ್ನೋ ನೋಟದ ಕುತೂಹಲವೇ ಜಾಸ್ತಿ.
ಹೂವು ಹಣ್ಣು ತರಕಾರಿ...!
ಬಸ್ನಲ್ಲಿ ಹೋಗುವಾಗ ತುಂಬಾ ಜನಕ್ಕೆ ಹೂವು ಹಣ್ಣು ತರಕಾರಿ ಇಂತಹ ವಸ್ತುಗಳು ನೆನಪಿಗೆ ಬರೋದು ಯಾಕಂತೀರಾ… ಕಿಟಕಿಯಲ್ಲಿ ಅವುಗಳು ಕಣ್ಣಿಗೆ ಬಿದ್ದಾಗಲೇ ಓ... ಇವತ್ತು ನನ್ನ ಹೆಂಡತಿ ಬಾಳೆಹಣ್ಣು ಮತ್ತೆ ನಾಳೆಗೆ ತರಕಾರಿ ಏನಾದರು ತನ್ನಿ. ಅಂತ ಹೇಳಿದ್ದು ಅಲ್ವಾ ಎಂದು ನೆನಪು ಮಾಡಿಕೊಳ್ಳುವ ಜನರೇ ಹೆಚ್ಚು. ಇದು ಕಿಟಕಿಯ ಮಹತ್ವ ಒಂದು ಕಡೆಯಾದರೆ, ಇನ್ನು ಮೊಬೈಲ್ ಸ್ವಾರಸ್ಯವೇ ಬೇರೆ, ಕಿಟಕಿಯಿಂದ ಹಾಯಾಗಿ ಬೀಸುತ್ತಿರುವ ಗಾಳಿ ಹಾಗೂ ಅಲ್ಲಿನ ನೋಟ ಅದರ ಜೊತೆಗೆ ನಮಗೆ ಇಷ್ಟವಾದ ಹಾಡು ಕಿವಿಯಲ್ಲಿ ಗುನುಗುತ್ತಿದ್ದರೆ, ನಾವು ಸಾಗುವ ಪ್ರಯಾಣ ಬಹು ಬೇಗನೆ ಬಂತು ತಲುಪಿದಂತೆ ಭಾಸವಾಗುತ್ತಿದೆ. ನನಗಂತೂ ಮೊದ ಮೊದಲು ಬಸ್ನಲ್ಲಿ ಓಡಾಡೋದು ದೊಡ್ಡ ತಲೆನೋವು ಅಂತ ಅನಿಸುತ್ತಿತ್ತು. ಆದರೆ ಈ ಕಿಟಕಿ ಮತ್ತು ಹಾಡುಗಳ ಸಹವಾಸ ನನ್ನನ್ನು ತುಸು ಬದಲಿಸಿದಂತಿದೆ, ಜೊತೆಗೆ ಬಸ್ಲ್ಲಿ ನನ್ನೊಟ್ಟಿಗೆ ನಾನು ಕಳೆಯುವ ಸಮಯ ನನ್ನ ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದಾಗಿದೆ. ಬಸ್ನಲ್ಲಿ ಪ್ರಯಾಣಿಸುವ ಹಲವಾರು ಜನ ತಮಗೆ ಇಷ್ಟದ ಕೆಲಸವನ್ನು ಬಸ್ನಲ್ಲೇ ಮಾಡುತ್ತಾರೆ ಎಂದು ಹೇಳಬಹುದು.
ಬಸ್ನೊಳಗಿನ ನೋಟ...!
ಆಫಿಸ್ನ ಜಂಜಾಟದಲ್ಲಿ ಮನೆಯವರೊಂದಿಗೆ ಮಾತನಾಡುವುದನ್ನು ಮರೆತ ಜನ ಈ ಸಂದರ್ಭವನ್ನು ಅವರೊಂದಿಗೆ ಫೋನಾಯಿಸಲು ಬಳಸುತ್ತಾರೆ. ಇನ್ನು ವಿದ್ಯಾರ್ಥಿಗಳು ಬಸ್ನಲ್ಲೇ ಪುಸ್ತಕ ಹಿಡಿದು ಬಾಯಿಪಾಠ ಮಾಡುತ್ತಾರೆ ಮತ್ತು ಐಟಿ-ಬೀಟಿ ಜನರು ಬಸ್ಸಿನಲ್ಲಿ ಕುಳಿತಾಗಲೇ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜುಗಳನ್ನು ನೋಡುವ ಸಮಯವಾಗಿರುತ್ತದೆ. ಇನ್ನು ಕೆಲವರಂತು ಹಿಂದಿನ ದಿನ ಮಿಸ್ ಮಾಡಿಕೊಂಡ ಸಿರಿಯಲ್, ಎಪಿಸೋಡ್ಗಳನ್ನು ನೋಡುತ್ತಾ ಕುಳಿತುಕೊಳ್ಳುತ್ತಾರೆ. ಇದರ ಮಧ್ಯೆ ವಯಸ್ಸಾದವರ ಜಗಳ ಬಸ್ಸಿನ ಕಂಡೆಕ್ಟರ್ಗಳ ಜೊತೆ ಬಸ್ಸ್ಟಾಪ್ ಇನ್ನು ಮುಂದೆ ಇದೆ. ಇಲ್ಲೇ ನಿಲ್ಲಿಸಿ ಬಿಟ್ಟರೆ ಅಲ್ಲಿ ನಾನ್ ಅಷ್ಟು ದೂರ ಹೇಗೆ ಹೋಗೋದು ಅನ್ನೋ ವಾದ ಒಂದು ಕಡೆಯಾದರೆ, ಬಸ್ ಸ್ಟಾಪ್ ಹಿಂದೇನೆ ಹೋಯಿತು ಎಲ್ಲೆಲ್ಲೋ ನಿಲ್ಲಿಸ್ತೀರಲ್ಲಾ ಅನ್ನೋ ಮಾತಿನ ಚಕಮಕಿ ಇನ್ನೊಂದು ಕಡೆ.
ಜೀಬ್ರಾ ಕ್ರಾಸ್ನಲ್ಲಿ ರಸ್ತೆ ದಾಟುವವವರ ಪರದಾಟ…!
ಇದೆಲ್ಲ ನೋಡಿ, ಉಸಿರು ಬಿಡೋ ಹೊತ್ತಿಗೆ ನಾವು ಇಳಿಯಬೇಕಾದ ಸ್ಟಾಪ್ ಬಂದು ಬಿಟ್ಟಿರುತ್ತೆ. ಇನ್ನೇನು ರೋಡ್ ಕ್ರಾಸ್ ಮಾಡಬೇಕು ಅನ್ನೋ ಸರಿಯಾದ ಟೈಮಿಗೆ ಸಿಗ್ನಲ್ ಲೈಟ್ ಗ್ರೀನ್ ಬಂದಿರುತ್ತೆ. ಇದರಿಂದಾಗಿ ಸೈಡಲ್ಲಿ ಹೋಗುವ ವಾಹನಗಳನ್ನು ನೋಡುತ್ತ ನಿಂತಿರುವ ಜನ ಒಂದು ಕಡೆ, ಆಕಡೆಯಿಂದ ರೆಡ್ ಯೆಲೋ ಗ್ರೀನ್ ಯಾವುದೇ ಸಿಗ್ನಲ್ ಇದ್ರೆ ನನಗೇನು ಎಂಬಂತೆ ಫೋನ್ನಲ್ಲಿ ಮಾತನಾಡುತ್ತಾ ಕೈ ಸನ್ನೆ ಮಾಡಿಕೊಂಡು ಈಸಿಯಾಗಿ ರೋಡ್ ಕ್ರಾಸ್ ಮಾಡೋ ವ್ಯಕ್ತಿಗಳು ಇನ್ನೊಂದು ಕಡೆ. ಅವರನ್ನ ಬೈಕೊಂಡು ಹೋಗುವ ವಾಹನ ಸವಾರರು ಮತ್ತೊಂದು ಕಡೆ. ಹೀಗೆ ಬಸ್ನ ಕಥೆ ವ್ಯಥೆ ಬಗ್ಗೆ ಹೇಳ್ತಾ ಹೋದ್ರೆ ಮುಗಿಯೋದೇ ಇಲ್ಲ ಒಟ್ನಲ್ಲಿ ಇದು ನಮ್ಮ ಬೆಂಗಳೂರಿನAತಹ ಸಿಟಿಗಳಲ್ಲಿ ನಡೆಯುವ ಪ್ರಯಾಣಿಕರ ವ್ಯಥೆ.