09/05/2018
"ಕಾದಂಬರಿ ಸಾರ್ವಭೌಮರೆನಿಸಿದ" ಕನ್ನಡದ ಕಾದಂಬರಿಕಾರರಾದ ಅನಕೃ ಅವರ ೧೧೦ ನೇ ಜನ್ಮದಿನ ಇಂದು.
ಇವರ ಪೂರ್ಣ ಹೆಸರು ಅರಕಲಗೂಡು ನರಸಿಂಗರಾವ್ ಕೃಷ್ಣಾರಾವ್. 1908 ನೇ ಇಸವಿ ಮೇ 9 ರಂದು ನರಸಿಂಗರಾವ್ ಮತ್ತು
ಅನ್ನಪೂರ್ಣಮ್ಮ ದಂಪತಿಗಳಿಗೆ ಜನಿಸಿದ ಅನಕೃರವರು ಪ್ರಾರ್ಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿ,
ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶಿಯ ವಿದ್ಯಾಲಯದಲ್ಲಿ ಮುಗಿಸಿದರು. ಇವರಿಗೆ ಬಾಲ್ಯದಲ್ಲೇ ಓದಿನಗೀಳು ಹೆಚ್ಚಿತು.
ವಿವೇಕಾನಂದರು ಮತ್ತು ಗಾಂಧೀಜಿಯ ಪರಿಚಯವಾಯಿತು, ಅವರ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ ಕೃಷ್ಣಾರಾಯರು
ಮೆಟ್ರಿಕ್ ಓದುತಿದ್ದಾಗಲೇ ಶಾಂತಿನಿಕೇತನಕ್ಕೆ ಹೋಗಿಬಂದರು.
ಅನಕೃರವರು ಶಾಲಾದಿನಗಳಿಂದಲೇ ಸಾಹಿತ್ಯದ ಕಡೆಗೆ ಅಭಿರುಚಿ ಹೊಂದಿದ್ದರು. ಅವರಿಗೆ ಬರವಣಿಗೆಯೆ
ಜೀವನೋಪಾಯವಾಗಿತ್ತು. ಜೊತೆಗೆ ಸಾಹಿತ್ಯ, ಸಂಗೀತ, ಕಲೆ, ನಾಟಕದ ಕಡೆಗೆ ತುಂಬಾ ಒಲವು ಮತ್ತು
ವಿಮರ್ಷಾಶಕ್ತಿಯಿದ್ದರಿಂದ ಎಲ್ಲಾ ವಿಷಯಗಳ ಬಗ್ಗೆ ಕೃತಿಗಳನ್ನು ರಚಿಸಿದರು. ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ
ಕಾದಂಬರಿ ಸಾರ್ವಭೌಮರೆನಿಸಿದ್ದಾರೆ.
"ನಟ ಸಾರ್ವಭೌಮ" ವೆಂಬ ಬೃಹತ್ ಕಾದಂಬರಿಯನ್ನು ರಚಿಸಿದ ಹಿರಿಮೆ ಅನಕೃ ರವರಿಗೆ ಸಂದಿದೆ. ಕನ್ನಡಮ್ಮನ
ಕೃತಿಯಲ್ಲಿ, ಕಾಂಚನಗಂಗಾ, ಬರಹಗಾರನ ಬದುಕು, ಕನ್ನಡ ಕುಲರಸಿಕರು, ಬಣ್ಣದ ಬೀಸಣಿಗೆ, ಸ್ಟೋರಿ ಆಫ್ ಇಂಡಿಯಾ ಇನ್ನೂ
ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಬರವಣಿಗೆಯಲ್ಲೂ ಅಲ್ಲದೇ ನಾಟಕಗಳಲ್ಲಿಯೂ ಪಾತ್ರವಹಿಸಿ ಸಾಮಾಜಿಕ,
ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳನ್ನೂ ಮಾಡಿದ್ದಾರೆ.
ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರ ಮೇಲೆ ಆಗುವ ಅನ್ಯಾಯ, ದೌರ್ಜನ್ಯದ ವಿರುದ್ಧ ಹೋರಾಡಿದರು, ಇದಕ್ಕಾಗಿ
ಕರ್ನಾಟಕದುದ್ದಕ್ಕೂ ಓಡಾಡಿ ತಮ್ಮ ಭಾಷಣ, ಚಳುವಳಿಗಳ ಮೂಲಕ ಕನ್ನಡಿಗರನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದರು.
ಕರ್ನಾಟಕದಲ್ಲೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ ಅವಕಾಶ ಸಿಗದಿದ್ದಾಗ ಹೋರಾಟ ನಡೆಸಿದರು. ನಮ್ಮ ಕನ್ನಡದ
ಸಂಗೀತಗಾರರನ್ನು ನಿರ್ಲಕ್ಷಿಸಿ ಬೇರೆ ಬೇರೆ ರಾಜ್ಯಗಳಿಂದ ಸಂಗೀತಗಾರರನ್ನು ಕರೆಸಿದಾಗ ಅದರ ವಿರುದ್ಧವೂ ಹೋರಾಡಿ ನಮ್ಮ
ಕನ್ನಡದ ಸಂಗೀತಗಾರರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟರು.
ಕನ್ನಡ ರಾಜ್ಯ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಣಿಪಾಲ್ ನಲ್ಲಿ ನಡೆದ 43 ನೇ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಹಾಗು ಕರ್ನಾಟಕ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
ಮಾ. ರಾಮಮೂರ್ತಿಯವರು ಕಟ್ಟಿದ "ಕನ್ನಡ ಪಕ್ಷವನ್ನು" ಉಳಿಸಿ, ಬೆಳೆಸುವುದರಲ್ಲಿ ಅನಕೃ ಅವರ ಪಾತ್ರ ಅಪಾರವಿದೆ. ಇಂದು
ನಮ್ಮ ಕನ್ನಡಿಗರಿಗೆ ಒಂದು ಒಳ್ಳೆಯ ಸ್ಥಾನ ಮಾನ ಸಿಕ್ಕಿದೆ ಎಂದರೆ ಅದರ ಹಿಂದೆ ಅನಕೃರವರದ್ದೂ ಅಪಾರ ಶ್ರಮ ಮತ್ತು
ಕನ್ನಡಿಗರಪರ ಹೋರಾಟವಿದೆ. ಇಂಥಾ ಮಹಾನ್ ವ್ಯಕ್ತಿಗಳು ಇದ್ದ ನಾಡಲ್ಲಿ ನಾವು ನೀವೆಲ್ಲ ಇರುವುದು ಒಂದು ಪುಣ್ಯ. ಇಂದು
ಅನಕೃರವರು ಜನಿಸಿದ ದಿನ ಹಾಗಾಗಿ ಪ್ರತಿಯೊಬ್ಬ ಕನ್ನಡಿಗನೂ ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ.