29/12/2023
ಹಾಸನ - ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿರುವಂತೆ ಆಲೂರು ತಾಲೂಕಿನ ಕಾಗನೂರು ಗ್ರಾಮದಲ್ಲಿ ಶ್ರೀರಾಮ ಸಂಚರಿಸಿದ್ದ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಪಾದುಕೆಗಳು ಭಕ್ತರ ಸೆಳೆಯುತ್ತಿವೆ.
ಶ್ರೀರಾಮ ಲಂಕೆಯಿಂದ ಹಿಂದಿರುಗುವಾಗ ಈ ಮಾರ್ಗವಾಗಿ ಹೋಗಿದ್ದ ಎಂಬ ನಂಬಿಕೆ ಇದ್ದು ಭಕ್ತರು ತಂಡೋಪ ತಂಡವಾಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕಾಗನೂರು ಗ್ರಾಮದ ಆಂಜನೇಯ ದೇವಾಲಯದಿಂದ ಅರ್ಧ ಕಿ.ಮೀ. ದೂರದ ಹೇಮಾವತಿ ನದಿ ತೀರದಲ್ಲಿ ಪಾದಾರೆಕಲ್ಲು ಎಂಬ ಸ್ಥಳ ಶ್ರೀರಾಮ ಹಾದು ಹೋಗಿದ್ದ ಮಾರ್ಗ ಎಂದು ಪೂಜೆ ಸಲ್ಲಿಸಲಾಗುತ್ತದೆ.
ಇಲ್ಲಿ ಈಶ್ವರ ಲಿಂಗ, ಜೊತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿವೆ.
ಬ್ರಹ್ಮಹತ್ಯಾ ಪರಿಹಾರ ದೋಷ:
ಶ್ರೀರಾಮನು ಲಂಕಾಧೀಶ ರಾವಣನ ಸಂಹಾರದ ನಂತರ ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಈಗಿನ ಕಾಗನೂರು ಗ್ರಾಮದಲ್ಲಿ ಶಿವಲಿಂಗ ಮೂರ್ತಿ ಸೃಷ್ಟಿಸಿ ದೋಷ ಪರಿಹಾರ ಮಾಡಲು ಬಯಸಿದ್ದ. ಆದರೆ ಪಕ್ಕದಲ್ಲಿಯೇ ಹರಿಯುವ ಹೇಮಾವತಿ ನದಿಯನ್ನು ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ನಡೆಸಿಕೊಂಡು, ಪತ್ನಿಯನ್ನು ಹೆಗಲಲ್ಲಿ ಕುಳ್ಳಿರಿಸಿಕೊಂದು ದಾಟುತ್ತಿದ್ದ ದೃಶ್ಯ ನೋಡಿ ಶ್ರೀರಾಮನು ದೋಷ ಪರಿಹಾರಕ್ಕೆ ಈ ಸ್ಥಳ ಯೋಗ್ಯವಲ್ಲವೆಂದು ಮುಂದಕ್ಕೆ ಸಾಗುತ್ತಾರೆ. ಈ ಮಧ್ಯೆ ಇಲ್ಲಿ ಆಹಾರ, ವಿಹಾರ, ವಿನೋದಗಳು ನಡೆದ ಲಕ್ಷಣಗಳಿವೆ. ಆಂಜನೇಯ ಶ್ರೀರಾಮರನ್ನು ಹೊತ್ತೊಯ್ದಿರುವ ಕುರುಹಾಗಿ ಇರುವ ದೊಡ್ಡ ಪಾದ ಆಂಜನೇಯನದು. ಆಟದ ವಿಚಾರ ಪಗಡೆ ಹಾಸಿನಿಂದ ತಿಳಿಯುತ್ತದೆ.
ವಿಶೇಷತೆಯುಳ್ಳ ಈ ಬಂಡೆ ಹೇಮಾವತಿ ಹಿನ್ನೀರು ಆವರಿಸುವುದರಿಂದ ಸಂಪೂರ್ಣ ಮುಚ್ಚಿಹೋಗುತ್ತದೆ.
ಈ ಸ್ಥಳಕ್ಕೆ ಭಕ್ತರು ಶ್ರದ್ಧಾಭಕ್ತಿಯಿಂದ ಬರುತ್ತಿದ್ದಾರೆ.
ಬಳಿಕ ಇಲ್ಲಿಂದ ಮುಂದೆ ಹೊರಟು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬಾಗೇರಿ ಗ್ರಾಮದ ಬಳಿ ಪೂಜೆ ಸಲ್ಲಿಸಲು ಮುಂದಾದಾಗ ನೀರಿನ ಅವಶ್ಯಕತೆ ಎದುರಾಗುತ್ತದೆ. ಆ ಸಂದರ್ಭದಲ್ಲಿ ಲಕ್ಷ್ಮಣ ತನ್ನ ಬಾಣವನ್ನ ಹೂಡಿ ಬಾವಿಯನ್ನ ತೆರೆದ ಎನ್ನಲಾಗುತ್ತಿದೆ. ಅ ಬಾವಿಯನ್ನ ಲಕ್ಷ್ಮಣ ಬಾವಿ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇಲ್ಲೌ ಶ್ರೀರಾಮ ಸನ್ನಿಧಿ ಇದೆ.
ನಂತರ ಕೊಡ್ಲಿಪೇಟೆ ಸಮೀಪದ ಕಿರುಗುಡ್ಲಿ ಗ್ರಾಮದಲ್ಲಿ ಸೀತೆ ರಾಮ ಲಕ್ಷ್ಮಣ ಒಂದು ಮಂದಿರದಲ್ಲಿ ಒಂದು ರಾತ್ರಿ ತಂಗಿ ಮರು ದಿನ ಅರಕಲಗೂಡು ತಾಲೂಕಿನ ರಾಮನಾಥಪುರಕ್ಕೆ ತೆರಳಿ ಅಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಗೋಗರ್ಭ ನುಸುಳಿ ಶಿವ ಪೂಜೆ ಸಲ್ಲಿಸಿದರು ಎಂದು ಹೇಳಲಾಗುತ್ತದೆ. ನಂತರ ಮುಂದುವರಿದು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಬಳಿ ಯೂ ಶ್ರೀರಾಮ ಸಂಚರಿಸಿದ ಎಂಬ ಕುರುಹುಗಳಿವೆ.
ರಕ್ಷಣೆಗೆ ಬೇಕಿದೆ ಆದ್ಯತೆ:
ಹೇಮಾವತಿ ನದಿ ದಡದಲ್ಲಿ ಪ್ರಾಚೀನ ಕಾಲದ ಕುರುಹುಗಳು ಪತ್ತೆಯಾಗಿದ್ದು, ಇವುಗಳ ರಕ್ಷಣೆಗೆ ಗಮನ ಹರಿಸಬೇಕಿದೆ. ಈ ವರ್ಷ ಮಳೆಯಿಲ್ಲದ ಕಾರಣ ಬಂಡೆ ಗೋಚರವಾಗಿದೆ. ಜೊತೆಗೆ ಶ್ರೀರಾಮ ಪಾದ ದರ್ಶನ, ಈಶ್ವರ ಪೂಜೆಗೆ ಅವಕಾಶ ದೊರೆಯಿತು. ಶ್ರೀರಾಮರ ಪಾದಸ್ಪರ್ಶವಾಗಿರುವ ಸ್ಥಳವನ್ನು ರಕ್ಷಿಸಿಕೊಳ್ಳಬೇಕಿದೆ.
ಆಲೂರು ತಾಲ್ಲೂಕಿನ ಕಾಗನೂರು ವಾಸ್ತವ್ಯಕ್ಕೆ ಪ್ರಶಸ್ತ ಸ್ಥಳವಲ್ಲ ಎಂಬುದನ್ನು ಅರಿತ ಶ್ರೀರಾಮನು ಕೊಡಗಿನ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಕೊಡಗಿನಲ್ಲಿ ಸಣ್ಣ ಮಂಟಪ ನಿರ್ಮಿಸಿಕೊಂಡು ಸೀತಾಮಾತೆ ಅಲ್ಲಿಯೇ ಸ್ನಾನ ಮಾಡಿದ್ದರು ಎಂಬುದಕ್ಕೆ ಪ್ರತೀತಿ ಇದೆ. ನಂತರ ಅಲ್ಲಿಂದ ಬಾಗೇರಿಯಲ್ಲಿ ವಾಸ್ತವ್ಯ ಹೂಡಿದ್ದು ಅಲ್ಲಿ ರಾಮೇಶ್ವರ ದೇವಾಲಯ ನಿರ್ಮಿಸಿದ್ದಾರೆ. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಇನ್ನು ಸಾಕಷ್ಟು ಮಾಹಿತಿ ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ಸಂಶೋಧಕರು ಗಮನ ಹರಿಸಬೇಕು.
-ಸತ್ಯನಾರಾಯಣ, ಹರಿಹಳ್ಳಿ ಗ್ರಾಮ