01/02/2025
ತಾರಿಕ್ ನಕಾಶ್ | ಹಲೀಮ್ ಮನ್ಸೂರ್
ಬಿಹಾರ ರಾಜ್ಯದಲ್ಲಿ Makhana Board, National Institute of Food Technology ಸ್ಥಾಪನೆ ಹಾಗು IIT Patna ಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಅಸ್ಸಾಂ ರಾಜ್ಯದಲ್ಲಿ Urea Plant ಸ್ಥಾಪನೆ ಮಾಡುವುದಾಗಿ ಹೇಳಲಾಗಿದೆ.
ಕರ್ನಾಟಕ ರಾಜ್ಯದ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು 2023-24ರ ಆಯವ್ಯಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನವನ್ನು ಘೋಷಿಸಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ಅನುದಾನವನ್ನು ನೀಡಿರುವುದಿಲ್ಲ. ಅದೇ ರೀತಿ ಬಿಹಾರದ ಜನತೆಗೂ ನೀಡಿರುವ ಭರವಸೆಯೂ ಹುಸಿಯಾಗುವ ಸಾಧ್ಯತೆ ಹೆಚ್ಚಿದೆ.
ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ವಿತ್ತ ಮಂತ್ರಿಯವರಿಗೆ ರಾಜ್ಯದ ಅಭಿವೃದ್ಧಿಗೆ ಹಾಗು ಜನಸಮಾನ್ಯರ ಅನುಕೂಲಕ್ಕಾಗಿ ಈ ಕೆಳಕಂಡ ಮನವಿಗಳನ್ನು ಸಲ್ಲಿಸಿತ್ತು.
✓ ಆಶಾ, ಆಂಗನವಾಡಿ ಕಾರ್ಯಕರ್ತರಿಗೆ ನೀಡುವ ಗೌರವಧನ ಹೆಚ್ಚಳ
✓ ಸಮಾಜಿಕ ಭದ್ರತಾ ಪಿಂಚಣಿ ಹೆಚ್ಚಳ
✓ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಲ್ಲಿ BPL ಕಾರ್ಡ್ ಹೊಂದಿರುವ ಎಲ್ಲ ಕುಟುಂಬಗಳಿಗೂ ಅನುಕೂಲ ಒದಗಿಸಬೇಕು
✓ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಫಲಾನುಭವಿ ವಂತಿಕೆಯನ್ನು ಹೆಚ್ಚಿಸುವುದು
✓ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತು ಪಶ್ಚಿಮ ಘಟ್ಟ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದು
✓ ಕೃಷ್ಣ ಮತ್ತು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸುವುದು
✓ ರಸ್ತೆ ಮತ್ತು ರೈಲು ಸಂಪರ್ಕ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವುದು
✓ ರಾಜ್ಯಕ್ಕೆ ಕೇಂದ್ರ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನ 5,495 ಕೋಟಿ ರೂ.ಗಳು ಹಾಗು ರಾಜ್ಯ ಕೇಂದ್ರಿತ ಅನುದಾನ 6,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು.
✓ ವಿಪತ್ತು ಪರಿಹಾರ ಅನುದಾನವನ್ನು ಹೆಚ್ಚಿಸುವಂತೆ ಕೇಳಲಾಗಿತ್ತು.
ಆದರೆ ಕೇಂದ್ರ ಸರ್ಕಾರವು ರಾಜ್ಯದ ಯಾವುದೇ ಮನವಿಯನ್ನು ಪುರಸ್ಕರಿಸಿರುವುದಿಲ್ಲ.
ಬೆಂಗಳೂರು ಉಪನಗರ ರೈಲು ಯೋಜನೆ (BSRP) ಗೆ ನೇರ ಅನುದಾನ ಘೋಷಣೆ ಆಗಿಲ್ಲ, ಇದು ಬೆಂಗಳೂರಿನ ಸಾರಿಗೆ ಸಮಸ್ಯೆ ಪರಿಹಾರಕ್ಕೆ ದೊಡ್ಡ ಹಿನ್ನಡೆ.
ಸ್ಮಾರ್ಟ್ ಸಿಟಿ ಮತ್ತು ಮೆಟ್ರೋ ರೈಲು ವಿಸ್ತರಣೆ: ನಗರಾಭಿವೃದ್ಧಿ ನಿಧಿ (Urban Challenge Fund – ₹1 ಲಕ್ಷ ಕೋಟಿ) ಘೋಷಣೆ ಮಾಡಲಾಗಿದೆ, ಆದರೆ ಬೆಂಗಳೂರು ಮೆಟ್ರೋ ಹಂತ-3 ಮತ್ತು Peripheral Ring Road ಕಾಮಗಾರಿಗೆ ಯಾವುದೇ ಅನುದಾನ ಇಲ್ಲ.
ಮುಂಬೈ, ದೆಹಲಿ ಮೆಟ್ರೋ ವಿಸ್ತರಣೆಗೆ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿದೆ ಆದರೆ ಬೆಂಗಳೂರು ಮೆಟ್ರೋಗೆ ಯಾವುದೇ ಅನುದಾನ ನೀಡಿಲ್ಲ.
ಐಟಿ-ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಸ್ಪಷ್ಟ ಯೋಜನೆಗಳಿಲ್ಲ.
ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ – ಕಡಿಮೆ ಉತ್ಪಾದನಾ ಸಾಮರ್ಥ್ಯ ಇರುವ 100 ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ಯೋಜನೆ ಘೋಷಿಸಲಾಗಿದೆ. ಆದರೆ, ಕರ್ನಾಟಕದ ಬರಗಾಲ ಪೀಡಿತ ಜಿಲ್ಲೆಗಳಿಗೆ ಯಾವುದೇ ವಿಶೇಷ ಅನುದಾನ ಘೋಷಣೆ ಮಾಡಿರುವುದಿಲ್ಲ.
ಕರ್ನಾಟಕ ರಾಜ್ಯವು 2023-24 ಹಾಗು 2024-25ನೇ ಸಾಲಿನಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಪರಿತಪಿಸಬೇಕಾಯಿತು ಆದರೆ ವಿಪತ್ತು ಪರಿಹಾರಕ್ಕೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಯಾವುದೇ ಸ್ಪಷ್ಟ ಯೋಜನೆ ಇಲ್ಲ.
ಈ ಆಯವ್ಯಯದ ಮುಖ್ಯಂಶಾಗಳು ಕೆಳಕಂಡಂತಿದೆ.
ಕೇಂದ್ರದ ತೆರಿಗೆ ಸ್ವೀಕೃತಿಯು (Gross Tax Revenue) 42.70 ಲಕ್ಷ ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗಿ 14.22 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. 2025-26ನೇ ಸಾಲಿಗೆ ಕರ್ನಾಟಕ ರಾಜ್ಯಕ್ಕೆ 51,877 ಕೋಟಿ ರೂ.ಗಳನ್ನು ತೆರಿಗೆ ಪಾಲನ್ನು ಅಂದಾಜಿಸಲಾಗಿದೆ.
ಕೇಂದ್ರದ ರಾಜಸ್ವ ವೆಚ್ಚವು 39.44 ಲಕ್ಷ ಕೋಟಿ ರೂ.ಗಳು ಹಾಗು ಬಂಡವಾಳ ವೆಚ್ಚವು 11.12 ಲಕ್ಷ ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. 2024-25ನೇ ಸಾಲಿನ ಆಯವ್ಯಯ ಅಂದಾಜಿಗೆ ಹೋಲಿಸಿದರೆ ಬಂಡವಾಳ ವೆಚ್ಚವು ಕೇವಲ 0.9ರಷ್ಟು ಮಾತ್ರ ಹೆಚ್ಚಳವಾಗಿದೆ.
2024-25ರ ಪರಿಷ್ಕೃತ ಅಂದಾಜಿನಲ್ಲಿ ಬಂಡವಾಳ ವೆಚ್ವವು ಕಡಿಮೆಯಾಗಿದ್ದು, ಆಯವ್ಯಯ ಅಂದಾಜಿಗಿಂತ ಶೇ.8.3ರಷ್ಟು ಕಡಿಮೆಯಾಗಿದೆ.
2024-25ನೇ ಸಾಲಿಗೆ 15.6 ಲಕ್ಷ ಕೋಟಿ ರೂ.ಗಳ ಸಾಲವನ್ನು ಅಂದಾಜಿಸಲಾಗಿದೆ.
ವಿತ್ತೀಯ ಕೊರತೆಯು ಜಿ.ಡಿ.ಪಿಯ ಶೇ.4.4ರಷ್ಟು ಹಾಗು ರಾಜಸ್ವ ಕೊರತೆಯು ಜಿ.ಡಿ.ಪಿಯ ಶೇ.1.5ರಷ್ಟು ಎಂದು ಅಂದಾಜಿಸಲಾಗಿದೆ.
ರಾಜ್ಯಗಳಲ್ಲಿ ಬಂಡವಾಳ ವೆಚ್ಚವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸಾಲದ ರೂಪದಲ್ಲಿ ವಿಶೇಷ ನೆರವನ್ನು 2024-25ನೇ ಸಾಲಿನ ಪರಿಷ್ಕೃತ ಅಂದಾಜಿನಲ್ಲಿ 25,000 ಕೋಟಿ ಕಡಿಮೆ ಮಾಡಲಾಗಿದೆ.
2024-25ರ ಆಯವ್ಯಯ ಅಂದಾಜಿಗೆ ಹೋಲಿಸಿದರೆ ಪರಿಷ್ಕೃತ ಅಂದಾಜಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡುವ ಸಹಾಯಾನುದಾನವನ್ನು ಶೇ.18ರಷ್ಟು ಕಡಿಮೆ ಮಾಡಲಾಗಿದೆ.
ಕೇಂದ್ರ ಸರ್ಕಾರ ನೀಡುವ ಸಹಾಯಧನ – ಆಹಾರ, ಗೊಬ್ಬರದಲ್ಲಿ ಯಾವುದೇ ಹೆಚ್ಚಳ ನೀಡಿಲ್ಲ.
ಗ್ರಾಮೀಣ ಭಾಗದ ಜನರಿಗೆ ಅನುಕೂಲ ಒದಗಿಸುವ ಉದ್ಯೋಗ ಖಾತ್ರಿ ಯೋಜನೆಯ ಅನುದಾನದಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ
ಬಜೆಟ್ ನ ಇತರೆ ಹೈಲೈಟ್ಸ್ ಗಳು…
2024-25 ರ ಪತಿಷ್ಕೃತ ಬಜೆಟ್ 47,16000 ಕೋಟಿ ಆಗಿತ್ತು. 104000 ಕೋಟಿ ತೆರಿಗೆ ಕಡಿಮೆ ಆಯ್ತು. ತೆರಿಗೆ ಅವರ ನಿರೀಕ್ಷೆಯಂತೆ ಸಂಗ್ರಹ ಆಗಿಲ್ಲ ಅಂತಲೇ ಅರ್ಥ
ಈ ಸಾಲಿನ 50,65,345 ಕೋಟಿ ಬಜೆಟ್ ಗಾತ್ರದಲ್ಲಿ ಸಾಲದ ಪ್ರಮಾಣವೇ 15,68,936 ಕೋಟಿಯಷ್ಟಿದೆ. ಇದರಲ್ಲಿ ಬಡ್ಡಿಗೇ 12,70000 ಕೋಟಿ ಹೋಗುತ್ತಿದೆ*
*ದೇಶದ ಸಾಲ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿವರೆಗೂ ಆಗಿದೆ.
*ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಇಂದು ಕೇಂದ್ರದ ಬಜೆಟ್ಟನ್ನು ಮಂಡಿಸಿದ್ದಾರೆ.
*ಒಟ್ಟಾರೆ ಬಜೆಟ್ ಗಾತ್ರ 50,65,345 ಕೋಟಿ ರೂಪಾಯಿಗಳು. 2024-25ನೇ ಸಾಲಿಗೆ ಸಂಬಂಧಿಸಿದಂತೆ 48.20 ಲಕ್ಷ ಕೋಟಿ ರೂಪಾಯಿಗಳ ಬಜೆಟ್ಟನ್ನು ಮಂಡಿಸಿದ್ದರು. ಆದರೆ, ಪರಿಷ್ಕೃತ ಅಂದಾಜಿನ ಪ್ರಕಾರ 47.16 ಲಕ್ಷ ಕೋಟಿ ರೂಪಾಯಿಗಳಷ್ಟು ವೆಚ್ಚವಾಗಬಹುದು ಎಂದು ಅಂದಾಜಿಸಿದ್ದಾರೆ. ಅದರಂತೆ ಇದನ್ನು ನೋಡಿದರೆ ಕೇಂದ್ರ ಸರ್ಕಾರಕ್ಕೆ 1.04 ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ ಎಂದು ಅಂದಾಜು ಮಾಡಿದ್ದಾರೆ. ಹಾಗಾಗಿ, ದೇಶದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
*ಕೇಂದ್ರ ಸರ್ಕಾರದ 50.65 ಲಕ್ಷ ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ 15,68,936 ಕೋಟಿ ರೂಪಾಯಿಯಷ್ಟು ಸಾಲ ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದಾರೆ. ಇದೂ ಸೇರಿದರೆ, ನನ್ನ ಅಂದಾಜಿನ ಪ್ರಕಾರ 2026ರ ಮಾರ್ಚ್ ವೇಳೆಗೆ ದೇಶದ ಸಾಲ 202 ರಿಂದ 205 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಬಹುದು.
*ನಿರ್ಮಲಾ ಸೀತಾರಾಮನ್ ಅವರೆ ತಮ್ಮ ಬಜೆಟ್ ದಾಖಲೆಗಳಲ್ಲಿ ಹೇಳಿರುವಂತೆ ಈ ವರ್ಷ ಬಡ್ಡಿ ಪಾವತಿಗಾಗಿ 12.7 ಲಕ್ಷ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತದೆ. ಈ ಬಜೆಟ್‌ನಲ್ಲಿ ವಿತ್ತೀಯ ಕೊರತೆ ಶೇ.4.4 ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ರೆವಿನ್ಯೂ ಕೊರತೆ ಶೇ.1.5 ರಷ್ಟು ಇರಲಿದೆ ಎಂದು ಅಂದಾಜು ಮಾಡಿದ್ದಾರೆ.
*ಮುಖ್ಯವಾಗಿ, ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯಕ್ಕೆ ಈ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆಂಧ್ರ ಪ್ರದೇಶ ಬಿಟ್ಟರೆ ಉಳಿದ ಯಾವ ರಾಜ್ಯಗಳಿಗೂ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹನ್ನೊಂದು ಬಜೆಟ್ ಗಳನ್ನು ನೋಡುತ್ತಾ ಬಂದ ನಮಗೆ ಹನ್ನೆರಡನೇ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಇದು ಅವರೇ ಆಗಾಗ ಹೇಳಿಕೊಳ್ಳುತ್ತಿರು ‘’ವಿಕಸಿತ ಭಾರತದ ಬಜೆಟ್ ಅಲ್ಲ ‘’ಅವನತ ಭಾರತ’’ ದ ಬಜೆಟ್.
ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿದ್ದ ಭಾರತವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದಕ್ಕೆ ಎಳೆದೊಯ್ಯುತ್ತಿದೆ. ಇದು ಯಥಾಪ್ರಕಾರ ಕರ್ನಾಟಕದ ಪಾಲಿಗೆ ಮಾತ್ರವಲ್ಲ ಇಡೀ ದೇಶಕ್ಕೆ ನಿರಾಶದಾಯಕ, ನಷ್ಟದಾಯಕ ಮತ್ತು ಹಾನಿಕಾರಕ ಬಜೆಟ್.
ಪ್ರಧಾನಿ ಮೋದಿಯವರು ನಮ್ಮದು ಒಕ್ಕೂಟ ವ್ಯವಸ್ಥೆಯ ಭಾರತ ಎನ್ನುವುದನ್ನು ಮರೆತೇ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಎಂದಾಕ್ಷಣ ಪ್ರತಿಯೊಂದು ರಾಜ್ಯದ ಜನತೆ ತಮ್ಮ ರಾಜ್ಯಕ್ಕೆ ಏನಾಧರೂ ಕೊಡುಗೆಗಳಿರಬಹುದೇ ಎಂದು ಆಸೆಕಂಗಳಿಂದ ನೋಡುತ್ತಾರೆ. ಇಂದು ಮಂಡಿಸಿದ ಬಜೆಟ್ ನಲ್ಲಿ ಒಂದೆಡೆ ಬಿಹಾರ ಇನ್ನೊಂದೆಡೆ ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳ ಪ್ರಸ್ತಾವವೂ ಇಲ್ಲ, ಆ ರಾಜ್ಯಗಳಿಗೆ ಸಂಬಂಧಿಸಿದ ಯೋಜನೆಗಳೂ ಇಲ್ಲ.
ಈ ಬಾರಿಯ ಬಜೆಟ್ ನಲ್ಲಿ ಕರ್ನಾಟಕದ ಜನತೆ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವಿವರವಾದ ಬೇಡಿಕೆಯ ಪಟ್ಟಿಯನ್ನು ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದ್ದೆ. ಬಹುಷ: ಆ ಬೇಡಿಕೆಯ ಪಟ್ಟಿಯನ್ನು ಅವರು ಕಣ್ಣೆತ್ತಿ ಕೂಡಾ ನೋಡಿದ ಹಾಗಿಲ್ಲ.
ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಬಿಜೆಪಿ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ‘’ ರಾಜ್ಯದ ಜನ ಬಿಜೆಪಿಯನ್ನು ಗೆಲ್ಲಿಸದಿದ್ದರೆ ನರೇಂದ್ರ ಮೋದಿ ಆಶೀರ್ವಾದ ನಿಮಗೆ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕರ್ನಾಟಕದ ಸ್ವಾಭಿಮಾನಿ ಜನತೆ ಆ ಬೆದರಿಕಗೆ ಜಗ್ಗದೆ ಬಿಜೆಪಿಯನ್ನು ಸೋಲಿಸಿದ್ದರು. ಅದರಂತೆ ನರೇಂದ್ರ ಮೋದಿಯವರು ಕರ್ನಾಟಕದ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿರುವವರೆಲ್ಲರೂ ಪಕ್ಷದ ಮತದಾರರಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ 46% ಜನ ಬಿಜೆಪಿ ಪಕ್ಷಕ್ಕೂ ಮತಚಲಾಯಿಸಿದ್ದಾರೆ. ನರೇಂದ್ರಮೋದಿಯವರು ಕರ್ನಾಟಕದ ವಿರುದ್ದ ಸೇಡು ತೀರಿಸಿಕೊಳ್ಳುವ ಭರದಲ್ಲಿ ತಮ್ಮ ಪಕ್ಷಕ್ಕೆ ಮತಹಾಕಿದವರ ವಿರುದ್ದವೂ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನ ಕಾರಣದಿಂದಾಗಿ ತೆರಿಗೆ ಹಂಚಿಕೆಯಲ್ಲಿ ನಮಗಾಗಿರುವ ಅನ್ಯಾಯ, ಜಿಎಸ್ ಟಿ ಪರಿಹಾರದಲ್ಲಿನ ಮೋಸ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಿಗದ ಪರಿಹಾರ, ನಮ್ಮ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ , ಮಹದಾಯಿ, ಭದ್ರಾ ಮೇಲ್ದಂಡೆ ಮತ್ತು ಮೇಕೆದಾಟು ವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಬೇಕಾದ ಅಂಗೀಕಾರ ಮತ್ತು ಆರ್ಥಿಕ ನೆರವು, ಬೆಂಗಳೂರು ಮಹಾನಗರದ ಮೂಲಸೌಕರ್ಯಕ್ಕೆ ನೆರವು, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹೆಚ್ಚಿಸಬೇಕಾಗಿರುವ ಕೇಂದ್ರ ಸರ್ಕಾರದ ಪಾಲಿನ ಪ್ರಮಾಣ—ಹೀಗೆ ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೆವು. ಇವುಗಳಲ್ಲಿ ಯಾವುದೇ ಒಂದು ಅಂಶದ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ.
ರಾಜ್ಯಕ್ಕೆ ಹದಿನೈದನೇ ಹಣಕಾಸು ಆಯೋಗದ ಪ್ರಕಾರವೇ ನೀಡಬೇಕಿರುವ ರೂ. 5495 ಕೋಟಿ ಹಣವನ್ನು ನೀಡುವ ಸುಳಿವು ಕೂಡ ಇಲ್ಲ. ತೆರಿಗೆ ಹೆಚ್ಚು ನೀಡುವ ರಾಜ್ಯಗಳ ಅಭಿವೃದ್ಧಿಗೆ ಅನುದಾನವನ್ನು ಹೆಚ್ಚಿಸುವ ಬಗ್ಗೆ ತುಟಿ ಬಿಚ್ಚಿಲ್ಲ.
ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ರೂ.5000ಕ್ಕೆ ಮತ್ತು ಅಡುಗೆ ಕೆಲಸಗಾರರು ಮತ್ತು ಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಕನಿಷ್ಠ ರೂ.5000 ಹೆಚ್ಚಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಪುರಸ್ಕರಿಸಿಲ್ಲ
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯಡಿ ನಿರ್ಮಿಸುವ ಮನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ್ಠ ಐದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ) ಯೋಜನೆಯಡಿ ನಿರ್ಮಿಸುವ ಮನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ‍್ಠ ಮೂರು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂದು ಕೇಳಿದ್ದೆವು, ಆh ಬೇಡಿಕೆಯನ್ನು ಕೂಡಾ ತಿರಸ್ಕರಿಸಲಾಗಿದೆ.
ಪ್ರಕೃತಿ ವಿಕೋಪಕ್ಕೆ ಪರಿಹಾರ ನೀಡುವ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ನ ಈಗಿನ ಮಾನದಂಡಗಳಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಅದನ್ನು ಬದಲಾಯಿಸಬೇಕು ಎಂದು ಕೇಳಿದ್ದೆವು, ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದ ಭೂ ಸ್ವಾಧೀನದ ಅರ್ಧದಷ್ಟು ವೆಚ್ವವನ್ನು ಮತ್ತು ಯೋಜನೆಯ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆ ಕೂಡಾ ಸಲ್ಲಿಸಿದ್ದೆವು. ಅದರ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗುವುದು ಎಂಬ ಆಶ್ವಾಸನೆಯನ್ನು ಈಡೇರಿಸಿಲ್ಲ. ಕಳಸಾ-ಬಂಡೂರಿ ಯೋಜನೆಗಳಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣ ಮಂಡಳಿಯ ಅನುಮತಿಯನ್ನೂ ಕೊಟ್ಟಿಲ್ಲ. ಮೇಕೆದಾಟು ಯೋಜನೆಯ ಬಗ್ಗೆಯೂ ಪ್ರಸ್ತಾಪವೇ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕೂಡಾ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಆರ್ಥಿಕ ನೆರವು ನೀಡಬೇಕೆಂಬ ಬೇಡಿಕೆ ಕೂಡಾ ಇತ್ತು. ಬಜೆಟ್ ನಲ್ಲಿನ ಜಲಸಂಪನ್ಮೂಲ ಇಲಾಖೆ ಗಂಗೆ, ಯಮುನೆ ಬಿಟ್ಟರೆ ಅದಕ್ಕಿಂತ ಕೆಳಗೆ ದಕ್ಷಿಣದ ಕಡೆ ಇಳಿದೇ ಇಲ್ಲ.
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಮಲೆನಾಡು ಪ್ರದೇಶದ ಅಭಿವೃದ್ದಿ ಮಾಡಲು ಹತ್ತು ಸಾವಿರ ಕೋಟಿ ರೂಪಾಯಿ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ದಿ ಯೋಜನೆಗಳಿಗಾಗಿ 5000 ಕೋಟಿ ರೂಪಾಯಿಯ ವಿಶೇಷ ಅನುದಾನ ನೀಡಬೇಕೆಂದು ಕೇಳಿದ್ದೆವು. ಅದಕ್ಕೆ ಬಜೆಟ್ ನಲ್ಲಿ ಪ್ರತಿಕ್ರಿಯೆಯೇ ಇಲ್ಲ.
ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುತ್ತಿರುವ ಅನುದಾನದಲ್ಲಿಯೂ ಕಡಿತವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರು ತಿಂಗಳಲ್ಲಿ 61 ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಜಾರಿಗೆ ತರುತ್ತಿರುವ 23 ಇಲಾಖೆಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ
ಈ ಹಿನ್ನೆಲೆಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಸ್ವರೂಪವನ್ನು ಬದಲಾಯಿಸಬೇಕೆಂದು ಕೋರಿದ್ದೆವು. ಈ ಯೋಜನೆಗಳನ್ನು ರೂಪಿಸುವಾಗ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ಮಾಡಬೇಕು. ಈ ಯೋಜನೆಗಳಲ್ಲಿ ವರ್ಷದಿಂದ ವರ್ಷಕ್ಕೆ ಕೇಂದ್ರದ ಪಾಲನ್ನು ಹೆಚ್ಚಿಸಬೇಕಾಗಿತ್ತು. ಆದರೆ ಪ್ರತಿ ಬಜೆಟ್ ನಲ್ಲಿ ಕೇಂದ್ರದ ಪಾಲನ್ನು ಕಡಿಮೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಸೆಸ್ ಮತ್ತು ಸರ್ಚಾರ್ಜ್ ಅನ್ನು ರದ್ದುಗೊಳಿಸಬೇಕು ಇಲ್ಲವೆ ಅದನ್ನು ಒಟ್ಟು ತೆರಿಗೆಯ ನಿಧಿಗೆ ಸೇರಿಸಿ ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು. . 2022ರ ಜುಲೈ ತಿಂಗಳಲ್ಲಿಯೇ ಜಿಎಸ್ ಟಿ ಪರಿಹಾರ ನೀಡುವುದನ್ನು ನಿಲ್ಲಿಸಿದರೂ 2026ರ ವರೆಗೆ ಸೆಸ್ ಸಂಗ್ರಹವನ್ನು ಮುಂದುವರಿಸಲಾಗಿದೆ.. ಈ ಸೆಸ್ ಬದಲಿಗೆ ಹೆಚ್ಚುವರಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ ಜಿಎಸ್ ಟಿ) ಸಂಗ್ರಹಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿತ್ತು. ಈ ಬಜೆಟ್ ನಲ್ಲಿ ನಮ್ಮ ಬೇಡಿಕೆಯ ಪ್ರಸ್ತಾವವೇ ಇಲ್ಲ.
ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾದ ಸಬ್‌ಅರ್ಬನ್ ರೈಲ್ವೇ, ಹೊರವರ್ತುಲ ರಸ್ತೆ, ಮೆಟ್ರೋ ವಿಸ್ತರಣೆ ಮುಂತಾದವುಗಳ ವಿಚಾರಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ.
ರಾಷ್ಟ್ರೀಯ ಬಜೆಟ್ ಒಂದಕ್ಕೆ ಇರಬೇಕಾದ ಸಮಗ್ರ ನೋಟವಾಗಲಿ, ದೂರಗಾಮಿ ದೂರದರ್ಶಿತ್ವವಾಗಲಿ, ಆರ್ಥಿಕ, ಸಾಮಾಜಿಕ, ಮಾನವಿಕ ಅಭಿವೃದ್ಧಿಯನ್ನು ಕಟ್ಟಿಕೊಡಬೇಕಾದ ಚಿಂತನೆಗಳು, ರೂಪಿಸಲಾದ ಯೋಜನೆಗಳಾಗಲಿ ಏನೊಂದೂ ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ. ಆಯವ್ಯಯ ಎನ್ನುವುದನ್ನು ಅಪಹಾಸ್ಯ ಮಾಡಿದಂತಿದೆ ಮೋದಿ ಸರ್ಕಾರದ ಈ ಬಜೆಟ್.
ದೇಶದ ಕೃಷಿ ಕ್ಷೇತ್ರ ಅತ್ಯಂತ ಸಂಕಷ್ಟ-ಸಂಕಟಗಳನ್ನು ಎದುರಿಸುತ್ತಿದೆ. ಶೇಕಡಾ 60ರಷ್ಟು ಉದ್ಯೋಗ ನೀಡುವ ಈ ಕ್ಷೇತ್ರದ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಆಗಾಗ ಕೃಷಿ ಕ್ಷೇತ್ರವನ್ನು ಉಲ್ಲೇಖಿಸಿದರು. ಆದರೆ ಬಜೆಟ್ ಒಳಗೆ ಇಣುಕಿ ನೋಡಿದರೆ ಸರ್ಕಾರದ ನಿಜವಾದ ಮುಖದ ದರ್ಶನವಾಗುತ್ತದೆ. ಆದರೆ ಕಳೆದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ 1,31,196 ಕೋಟಿ ರೂಪಾಯಿಗಳ ಅನುದಾನ ನೀಡಿದ್ದರೆ ಈ ಬಜೆಟ್ ನಲ್ಲಿ 1,27.290 ಕೋಟಿ ರೂಪಾಯಿ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಕಳೆದ ಬಜೆಟ್ ಗಿಂತಲೂ ಕಡಿಮೆ ಅನುದಾನ ಒದಗಿಸಲಾಗಿದೆ.
ವಸತಿ ಕ್ಷೇತ್ರಕ್ಕೆ ಕಳೆದ ಬಜೆಟ್ ನಲ್ಲಿ 54,500 ಕೋಟಿ ರೂಪಾಯಿ ನಿಗದಿ ಪಡಿಸಲಾಗಿತ್ತು. ಆದರೆ ಪರಿಷ್ಕೃತ ಬಜೆಟ್ ನಲ್ಲಿ ಅದನ್ನು 32,426 ಕೋಟಿಗೆ ಇಳಿಸಲಾಗಿದೆ. ಜಲಜೀವನ್ ಮಿಷನ್ ಗೆ ಕಳೆದ ಬಜೆಟ್ ನಲ್ಲಿ 70163 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು ಆದರೆ ಪರಿಷ್ಕೃತ ಬಜೆಟ್ ನಲ್ಲಿ ಅದನ್ನು 27,694 ಕೋಟಿ ರೂಪಾಯಿ ಇಳಿಸಲಾಗಿದೆ. ಅಂದರೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಷ್ಟು ಹಣವನ್ನು ಯೋಜನೆಗಳಿಗೆ ಖರ್ಚು ಮಾಡಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಗರಿಷ್ಠ ಉದ್ಯೋಗದ ಅವಕಾಶಗಳನ್ನು ಕಲ್ಪಿಸುವ ನರೇಗಾ ಯೋಜನೆಗೆ 2023-24 ಅವಧಿಯಲ್ಲಿ 80,153 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಕಳೆದ ವರ್ಷದ ಬಜೆಟ್ ನಲ್ಲಿ ಅದನ್ನು 86,000 ಕೋಟಿ ರೂಪಾಯಿಗೆ ಇಳಿಸಲಾಗಿತ್ತು. ಈವರ್ಷದ ಬಜೆಟ್ ನಲ್ಲಿ 86,000 ಕೋಟಿ ರೂಪಾಯಿಯನ್ನೇ ಮುಂದುವರಿಸಲಾಗಿದೆ.
ಆದಾಯ ತೆರಿಗೆಯ ಮಿತಿಯನ್ನು ಹನ್ನೆರಡು ಲಕ್ಷ ರೂಪಾಯಿಗಳಿಗೆ ಏರಿಸಿರುವುದನ್ನು ಕೊಂಡಾಡಲಾಗುತ್ತಿದೆ. ನಮ್ಮಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಕೇವಲ 8.09 ಕೋಟಿ ಜನ. ಇದು ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ 6.64ರಷ್ಟಾಗತ್ತದೆ ಅವರಲ್ಲಿ 4.90 ಕೋಟಿ ಜನ ಸೊನ್ನೆ ತೆರಿಗೆ ಪಾವತಿ ದಾರರು. ಆದ್ದರಿಂದ ಆದಾಯ ತೆರಿಗೆ ಮಿತಿಯ ಹೆಚ್ಚಳ ಮೇಲು ಮಧ್ಯಮ ವರ್ಗದ ಒಂದಷ್ಟು ಕುಟುಂಬಗಳಿಗೆ ನೆರವಾಗಬಹುದೇ ವಿನ: ದಿನದ ಆದಾಯ 100-150 ರೂಪಾಯಿಯಷ್ಟೆ ಹೊಂದಿದ ಶೇಕಡಾ 70ರಷ್ಟು ಜನಸಂಖ್ಯೆಗೆ ಇದರಿಂದ ಯಾವ ಲಾಭವೂ ಇಲ್ಲ.
ಕೇಂದ್ರ ಬಜೆಟ್ ಎನ್ನುವುದು ದೇಶದ ಅಭಿವೃದ್ದಿಯ ನಕಾಶೆಯನ್ನು ಬಿಂಬಿಸುವ ಆರ್ಥಿಕ ನೀತಿ, ನಿರೂಪಣೆಗಳು, ಯೋಜನೆಗಳ ಸಮಗ್ರ ಚಿತ್ರಣವನ್ನು ನೀಡುವ ದಾಖಲೆಯಾಗಿರಬೇಕು. ಅಭಿವೃದ್ಧಿಯ ವಿಚಾರದಲ್ಲಿ ಪ್ರಸಕ್ತ ದೇಶ ಎದುರಿಸುತ್ತಿರುವ ಸವಾಲಗಳನ್ನು ಸಮರ್ಥವಾಗಿ ಎದುರಿಸಲು ರೂಪಿಸಿರುವ ನೀತಿ, ಯೋಜನೆಗಳ ಮಾಹಿತಿಯನ್ನು ನೀಡಬೇಕು. ಇದಕ್ಕೆ ಒದಗಿಸಿರುವ ಹಣಕಾಸಿನ ವಿಚಾರಗಳನ್ನು ತಿಳಿಸಬೇಕು. ಈ ಬಜೆಟ್‌ಗೆ ಅಂತಹದ್ದೊಂದು ಸ್ವರೂಪವೇ ಇಲ್ಲ.
ಕೃಷಿ ಹಾಗೂ ನೀರಾವರಿ ಕ್ಷೇತ್ರಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಒತ್ತು ನೀಡುವಂತಹ ಯಾವುದೇ ಮಹತ್ವದ ಯೋಜನೆಗಳನ್ನು, ಕ್ರಮಗಳನ್ನು ಕೇಂದ್ರ ಕೈಗೊಂಡಿಲ್ಲ. ಯಾವುದೇ ರಾಷ್ಟ್ರೀಯ ಯೋಜನೆಗಳ ಪ್ರಸ್ತಾಪವಿಲ್ಲ. ಅ ಮೂಲಕ ಬಂಡವಾಳ ವೆಚ್ಚವನ್ನು ಮಾಡುವುದರಿಂದ ಸಂಪೂರ್ಣ ಹಿಂದೆ ಸರಿದಿದ್ದು ದೇಶದೆಡೆಗಿನ ತನ್ನ ಜವಾಬ್ದಾರಿ ಹಾಗೂ ಕರ್ತವ್ಯಗಳಿಂದ ವಿಮುಖವಾಗಿದೆ.
ದೇಶದ ಅಭಿವೃದ್ಧಿ ಎಂಜಿನ್‌ಗಳು ಎಂದೇ ಕರೆಯಲಾಗುವ ಮೆಟ್ರೋ ನಗರಿಗಳು, ಬೃಹತ್ ನಗರಗಳಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಯಾವುದೇ ವಿಶೇಷ ಮಹತ್ವ ದೊರೆತಿಲ್ಲ. ‘ಅರ್ಬನ್ ಚಾಲೆಂಜ್ ಫಂಡ್’ ಎನ್ನುವ ಯೋಜನೆ ಘೋಷಿಸಲಾಗಿದೆಯಾದರೂ ಇದಕ್ಕೆ ಮೀಸಲಿರಿಸಿರುವ ಮೊತ್ತ ಅತ್ಯಲ್ಪ.
ರಾಜ್ಯದ ಯೋಜನೆಗಳೆಡೆಗಿನ ದಿವ್ಯ ಮೌನ, ಅಸಡ್ಡೆ, ನಿರ್ಲಕ್ಷ್ಯಗಳು ಈ ಬಾರಿಯೂ ಯಥಾ ಪ್ರಕಾರ ಮುಂದುವರೆದಿವೆ. ರಾಜ್ಯದ ಬೇಡಿಕೆಗಳ ಬಗ್ಗೆ ಮಲತಾಯಿ ಧೋರಣೆ ಮಾತ್ರವೇ ಅಲ್ಲದೆ, ಅಸೀಮ ನಿರ್ಲಕ್ಷ್ಯ, ಪ್ರಜ್ಞಾಪೂರ್ವಕ ಉದಾಸೀನ ಮನೋಭಾವವನ್ನು ಕೇಂದ್ರ ಯಥಾಪ್ರಕಾರ ಮುಂದುವರೆಸಿದೆ.
ಈ ಬಜೆಟ್‌ನ ಸ್ವರೂಪವೇ ಚದುರಿದಂತೆ ಇದ್ದು, ಅಭಿವೃದ್ಧಿಯ ಕುರಿತು ಸ್ಪಷ್ಟವೂ, ನಿರ್ದಿಷ್ಟವೂ ಆದ ವಲಯವಾರು, ಕ್ಷೇತ್ರವಾರು, ಭೌಗೋಳಿಕವಾರು ಮಾಹಿತಿಗಳನ್ನು ನೀಡುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದೆ. ಹಾಗಾಗಿ, ದೇಶದ ಸಮಗ್ರ ಅಭಿವೃದ್ಧಿಯ ಚಿತ್ರಣವೇ ಬಜೆಟ್‌ನಲ್ಲಿ ಮಾಯವಾಗಿದ್ದು, ಅಸ್ಪಷ್ಟತೆ, ಗೊಂದಲಗಳಿಂದ ತುಂಬಿದೆ.
ಕನ್ನಡಿಗರ, ಕರ್ನಾಟಕದ ಪಾಲಿಗೆ ಇದೊಂದು ನಿರಾಶಾದಾಯಕ, ಅಭಿವೃದ್ಧಿವಿಹೀನ ಬಜೆಟ್. ಕನ್ನಡಿಗರಿಂದ ತೆರಿಗೆ ಮಾತ್ರವೇ ಪಡೆಯಬೇಕು ಬದಲಾಗಿ ಏನೂ ನೀಡಬಾರದು ಎನ್ನುವ ಮನೋಭಾವ ಕೇಂದ್ರ ಸರ್ಕಾರದಲ್ಲಿ ಆಳವಾಗಿ ಬೇರೂರಿರುವುದಕ್ಕೆ ಈ ಬಜೆಟ್ ಸಾಕ್ಷೀರೂಪವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮೈಯ ಆಕ್ರೋಶ ವ್ಯಕ್ತಪಡಿಸಿದರು
ತಾರಿಕ್ ನಕಾಶ್ | ಹಲೀಮ್ ಮನ್ಸೂರ್