![ಭಗೀರನ ವಿಮರ್ಶೆ... ನಾಯಕ ಸಮಾಜದ ಒಳಗಿನ ದುಷ್ಟಶಕ್ತಿಗಳ ವಿರುದ್ಧ ಹೊರಡುವ ಕಥೆ ಹೊಂದಿರುವ, ಅದೆಷ್ಟೋ ಸೂಪರ್ ಹೀರೋ ಸಿನಿಮಾಗಳು...](https://img5.medioq.com/261/890/122093625842618901.jpg)
06/11/2024
ಭಗೀರನ ವಿಮರ್ಶೆ...
ನಾಯಕ ಸಮಾಜದ ಒಳಗಿನ ದುಷ್ಟಶಕ್ತಿಗಳ ವಿರುದ್ಧ ಹೊರಡುವ ಕಥೆ ಹೊಂದಿರುವ, ಅದೆಷ್ಟೋ ಸೂಪರ್ ಹೀರೋ ಸಿನಿಮಾಗಳು ಬಂದು ಹೋಗಿವೆ, ಆದರೆ ಕಥೆ ಹಳೆಯದಾದರೂ ಹೊಸ ಒಗ್ಗರಣೆಯ ಹದವಾದ ಸಿನಿಮಾ ಭಗೀರ.
ಪ್ರಶಾಂತ್ ನೀಲ್ ರ ಎಲ್ಲ ಕಥೆಗಳಲ್ಲಿರುವಂತೆ ತಾಯಿ ಮಗನ ಕಥೆ ಇಲ್ಲಿಯೂ ಇದೆ , ಇದ್ದರೂ ತೊಂದರೆ ಏನು ಇಲ್ಲ ಬಿಡಿ ,ಏಕೆಂದರೆ ಅದೇ ಅವರ ಬಂಡವಾಳ ಅದೇ ಪ್ರೇಕ್ಷಕನ ವೀಕ್ನೆಸ್ ಕೂಡ , ಅದನ್ನು ತಿಳಿದೆ ಕಥೆಗಾರ ಪ್ರೇಕ್ಷಕನ ಭಾವನೆಗಳ ಜೊತೆ ಆಟ ಆಡೋದು,ಆಗಲೇ ಅಲ್ಲವಾ ಸಿನಿಮಾ ಮತ್ತು ತಂಡ ಗೆಲ್ಲೋದು.
Dr. ಸೂರಿಯವರ ಮೊದಲ ಸಿನಿಮಾ ಲಕ್ಕಿಗೂ ಈ ಭಗೀರನಿಗೂ ಇರುವ ವ್ಯತ್ಯಾಸ ಅಜಗಜಾಂತರ
ಪ್ರಶಾಂತ್ ನೀಲ್ ರ ಕಥೆಯನ್ನ ಜಾಣ್ಮೆಯಿಂದಲೇ ಪ್ರೇಕ್ಷಕನ ಮುಂದೆ ಇಟ್ಟಿದ್ದಾರೆ, ಅದು ಅವರ ಜವಾಬ್ದಾರಿಯೂ ಕೂಡ ಆಗಿತ್ತು , K.G.F. ಸಿನಿಮಾದ ಛಾಯೆ ಎಲ್ಲಿಯೂ ಕಾಣಬಾರದು ಅಂತಲೇ ಜಾಗರೂಕರಾಗಿ ಕೆಲಸ ಮಾಡಿದ್ದರೂ, ಅಲ್ಲಲ್ಲಿ ಕೆಲವೊಮ್ಮೆ ಕೆಜಿಎಫ್ ನ ನೆರಳು ಕಾಣಬಹುದು , ಏಕೆಂದರೆ ನಾವು ಅದೇ ದೃಷ್ಟಿಕೋನದಲ್ಲಿ ನೋಡುತ್ತೇವೆ ಕೂಡ. ಹಲವಾರು ಹಾಸ್ಯ ಕಲಾವಿದರು ಇದ್ದರೂ ಅವರನ್ನು ಹಾಸ್ಯ ದೃಶ್ಯಗಳಿಗೆ ಸೀಮಿತವಾಗಿಸಿಲ್ಲ,ಎಲ್ಲಿಯೂ ಅವಕಾಶಗಳೂ ಇಲ್ಲ, ಅದು ಬೇಕಾಗಿಯೂ ಇರಲಿಲ್ಲ. ಇದು ಉತ್ತಮ ನಿರ್ಧಾರ ಎನ್ನೋದು ನನ್ನ ಭಾವನೆ, ಮೊದಲಾರ್ಧದಲ್ಲಿ ವೇದಾಂತ್ ಭಗೀರನಾಗುವ ಪಯಣದಲ್ಲಿ ವಿಲ್ಲನ್ ಗಳ ಇನ್ಟ್ರೋ ಭಯ ಹುಟ್ಟಿಸುತ್ತವೆ, ಅವು ಬೇಕಾಗಿದ್ದವು ಕೂಡ. ವೇದಾಂತ್ ಭಗೀರನಾಗಲು ಬರೆದಿರುವ ಕೆಲವು ಇನ್ಟೆನ್ಸ್ ದೃಶ್ಯಗಳು ರಿಪೀಟೆಡ್ ಆಗಿವೆ, ರಾಣಾನಾಗಿ ಆರ್ಭಟಿಸಿರುವ ಗರುಡ ರಾಮ್ ನಟನೆ ಉತ್ತಮ,ಪಾತ್ರಕ್ಕೆ ಮಾಡಿರುವ ಪೂರ್ವ ತಯಾರಿ ತೆರೆಯ ಮೇಲೆ ಎದ್ದು ಕಾಣುತ್ತದೆ. ಮೊದಲು ಭಯ ಹುಟ್ಟಿಸುವ ಖಳ ನಾಯಕ ವಿರಾಮದಾ ನಂತರ ವೀಕ್ ಆದ್ರೂ ಅನ್ಸುತ್ತೆ ,ಖಳ ನಾಯಕನ ಮೇಕಪ್ ಅಷ್ಟು ಪರಿಪೂರ್ಣವಾಗಿಲ್ಲ, ಇವೆಲ್ಲಾ ಆಗಿಯೂ ಒಂದು ಕಂಪ್ಲೀಟ್ ಕಮರ್ಷಿಯಲ್ ಆಕ್ಷನ್ ಸಿನಿಮಾವನ್ನು ಅಧ್ಯಾಯಗಳಾಗಿ ಪ್ರೇಕ್ಷಕನ ಮುಂದಿಟ್ಟಿರುವುದು ಬುದ್ಧಿವಂತಿಕೆ,ಅದರಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಕೂಡ.
ನಾಯಕಿ ರುಕ್ಮಿಣಿ ವಸಂತ್ ತಮಗೆ ಕೊಟ್ಟಿರುವ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ, ಪಾತ್ರ ಚಿಕ್ಕದಾದರೂ ಅವಶ್ಯಕ ಮತ್ತು ಎಷ್ಟು ಬೇಕೋ ಅಷ್ಟಕ್ಕೇ ಸೀಮಿತ ಅದರಲ್ಲಿ ನಿರ್ದೇಶಕರ ಬರವಣಿಗೆ ಉತ್ತಮ.
ಇನ್ನು ಅಜನೀಶ್ ಲೋಕನಾಥ್ ಹಾಡುಗಳು ಥಿಯೇಟರ್ನಲ್ಲೇ ಉಳಿದು ಬಿಡುತ್ತವೆ,ಹಿನ್ನೆಲೆ ಸಂಗೀತ ಹದವಾಗಿದೆ,
ಇನ್ನುಳಿದಂತೆ ಪೋಷಕ ಪಾತ್ರ ವರ್ಗ
ರಂಗಾಯಣರಘು,ಪ್ರಕಾಶ್ ತುಮ್ಮಿನಾಡು,ಅವಿನಾಶ್,ಸುಧಾರಾಣಿ ,ಅಚ್ಯುತ್ ಕುಮಾರ್ ಎಲ್ಲರೂ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ,ಇನ್ನು ಪ್ರಕಾಶ್ ರಾಜ್, ಇವರ ನಟನೆ ಬಗ್ಗೆ ದೇಶವೇ ತಿಳಿದಿರುವಾಗ ವಿಶ್ಲೇಷಣೆಯೇ ಬೇಡ ಎನ್ನುವ ನನ್ನ ವಾದ,ಪ್ರಕಾಶ್ ರಾಜ್ ಬರುವವರೆಗೂ ಸಿನಿಮಾ ಒಂದು ಲೆಕ್ಕ ಆದ್ರೆ ಬಂದ್ಮೇಲೆ ಒಂದು ಲೆಕ್ಕ .ಪ್ರಕಾಶ್ ರಾಜ್ ರವರ ಪಾತ್ರ ಇನ್ನಷ್ಟು ಗಟ್ಟಿಯಾಗಿದ್ದರೆ ಭಗೀರ ಇನ್ನಷ್ಟು ಬಲಿಷ್ಟನಾಗಿ ಕಾಣುತ್ತಿದ್ದ,
ಶ್ರೀ ಮುರಳಿ ವೇದಾಂತ್ ಆಗಿ ಅಬ್ಬರಿಸಿದರೇ ಭಗೀರನಾಗಿ ಘರ್ಜಿಸಿದ್ದಾರೆ ಅವರ ಅಭಿನಯ ಅದ್ಭುತ, ಹಾಲಿವುಡ್ ನ ಮಾರ್ವೆಲ್ ಮತ್ತು ಡಿಸಿ ಸೂಪರ್ ಹೀರೋ ಗಳಂತಲ್ಲ ನಮ್ಮ ಭಗೀರ, ನಿರ್ದೇಶಕರೇ ಹೇಳುವಂತೆ ಭಗೀರ ಸೂಪರ್ ಹೀರೋ ಅಲ್ಲ ಸೂಪರ್ ಕಾಪ್ ವೇದಾಂತ್ ಸೂಪರ್ ಹೀರೋ, ಶ್ರೀ ಮುರುಳಿಯವರ ಸಿನಿಮಾ ಪಯಣದಲ್ಲಿ ಈ ಸಿನಿಮಾ ಉಗ್ರಂ ನಂತರದ ಒಂದು ಮೈಲಿಗಲ್ಲು. ಪಾತ್ರಕ್ಕಾಗಿ ಅವರು ನಡೆಸಿರುವ ತಯಾರಿ ತೆರೆಯ ಮೇಲೆ ಕಾಣುತ್ತದೆ, ಸಿನಿಮಾಕ್ಕಾಗಿ 3 ವರ್ಷಗಳು ತೆಗೆದುಕೊಂಡರು ಮೋಸ ಆಗಿಲ್ಲ , ತಡವಾಗಿದ್ದರು ಒಂದೊಳ್ಳೆ ಸಿನಿಮಾ ಬಂದಿದೆ, ಇಲ್ಲಿವರೆಗೂ ಬಂದಿರುವ ಮುರುಳಿಯವರ ಸಿನಿಮಾಗಳ ಪೈಕಿ ಆಕ್ಷನ್ ಗೆ ಹೆಚ್ಚು ಒತ್ತು ನೀಡಲಾಗಿದೆ ಅದಕ್ಕೆ ತಕ್ಕಂತೆ ಮುರುಳಿಯವರು ನ್ಯಾಯ ಒದಗಿಸಿದ್ದಾರೆ ಶ್ರೀ ಮುರುಳಿಯವರ ಅಭಿಮಾನಿಗಳಿಗೆ, ಅತಿ ಹೆಚ್ಚು ಆಕ್ಷನ್ ಇಷ್ಟ ಪಡುವ ಪ್ರೇಕ್ಷಕ ಮಹಾಶಯನಿಗೆ ಭಗೀರ ದೀಪಾವಳಿಯ ಹಬ್ಬದೂಟ.