18/11/2020
`ಋತ' ಕನ್ನಡದ ದೃಷ್ಟಿಯಿಂದ ವಿನೂತನ ಪ್ರಯೋಗ. ನಾವೆಲ್ಲರೂ ಗೆದ್ದೆತ್ತಿನ ಬಾಲವನ್ನು ಹಿಡಿಯುವವರು. ಅದು ರಾಜಕೀಯ ಕ್ಷೇತ್ರವಿರಲಿ, ಸಾಮಾಜಿಕ ಕ್ಷೇತ್ರವಿರಲಿ, ಸಾಂಸ್ಕøತಿಕ ಲೋಕವಿರಲಿ ಅಥವಾ ಸಾಹಿತ್ಯಿಕ ಪ್ರಪಂಚವಿರಲಿ. ಗಾಳಿ ಬಂದಾಗ ತೂರಿಕೊಂಡು ಬಹುಬೇಗ ಸಾಧನೆಯ ತುತ್ತ ತುದಿಯನ್ನು ಕೆಲವೇ ಸಮಯದಲ್ಲಿ ತಲುಪಿಬಿಡಬೇಕು ಎನ್ನುವ ಮಹದಾಸೆಯನ್ನು ಹೊತ್ತುಕೊಂಡು ಬದುಕುವವರು ನಾವು. ಒಂದು ಸಿನಿಮಾ ಗೆದ್ದರೆ ಅದೇ ರೀತಿಯ ಹತ್ತಾರು ಚಿತ್ರಗಳು ಬರುತ್ತವೆ; ಒಂದು ಪಕ್ಷ ಚುನಾವಣೆಯಲ್ಲಿ ಗೆದ್ದರೆ ಬೇರೆ ಪಕ್ಷಗಳ ನಾಯಕರು ಅದರ ಕಡೆಗೆ ಮುಖಮಾಡುತ್ತಾರೆ; ಒಂದು ಪತ್ರಿಕೆ ಯಶಸ್ವಿಯಾದರೆ ಅದೇ ಮಾದರಿಯ ಹತ್ತಾರು ಪತ್ರಿಕೆಗಳು ಹುಟ್ಟಿಕೊಳ್ಳುತ್ತವೆ; ಒಂದು ಪ್ರಕಾರದ ಸಾಹಿತ್ಯ ಜನಮೆಚ್ಚುಗೆ ಪಡೆದರೆ ಅದೇ ರೀತಿಯ ಹತ್ತುಹಲವಾರು ಬರಹಗಳು ಪ್ರಕಟಗೊಳ್ಳುತ್ತವೆ. ಇವೆಲ್ಲವನ್ನು ಒಟ್ಟಾರೆಯಾಗಿ ಗಮನಿಸಿದಾಗ ಮಾಧವ ಐತಾಳ್ ಬಹಳ ಇಷ್ಟವಾಗುತ್ತಾರೆ; ಅವರ `ಋತ' ಮನಮುಟ್ಟುತ್ತದೆ.
ವಿಭಿನ್ನ ಮಾದರಿಯ ಯೋಚನೆ ಹಾಗೂ ಯೋಜನೆ ಮೂಲಕ ಅವರು ಹೊರತರುತ್ತಿರುವ "ಋತ' ಆಳವಾದ ಅಧ್ಯಯನ ಮತ್ತು ಅಪಾರ ಪರಿಶ್ರಮವನ್ನು ಬೇಡುತ್ತದೆ. ಪ್ರತಿಯೊಂದು ಸಂಚಿಕೆಯೂ ಒಂದು ಪ್ರತ್ಯೇಕ ವಿಷಯದ ಚೌಕಟ್ಟನ್ನು ಹಾಕಿಕೊಂಡು, ಅದಕ್ಕೆ ಸಂಬಂಧಿಸಿದ ಹಲವಾರು ಗಮನೀಯ ಲೇಖನಗಳನ್ನು ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತದೆ. ಮಾಧವ ಐತಾಳ್ ಅವರೇ ಹೇಳಿಕೊಳ್ಳುವಂತೆ `ಕನ್ನಡಕ್ಕೆ ಜಗತ್ತಿನ ಎಲ್ಲ ಜ್ಞಾನಧಾರೆಗಳು ಬರಬೇಕು ಎನ್ನುವ ಆಶಯವನ್ನು ಆಗುಮಾಡುವ ಒಂದು ಪ್ರಯತ್ನವೇ ಋತ.' ಇದು ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ವಸ್ತುಗಳನ್ನು ವಿಮರ್ಶೆ ಮಾಡುತ್ತದೆ, ವಿಶ್ಲೇಷಿಸುತ್ತದೆ, ಆ ಕುರಿತಾಗಿ ವಿಚಾರವನ್ನು ಮಂಡಿಸುತ್ತದೆ ಮತ್ತು ಸಂವಾದವನ್ನು ನಡೆಸುತ್ತದೆ.
`ಋತ' ನಿಯತಕಾಲಿಕದ ಮೂರು ಸಂಚಿಕೆಗಳನ್ನು ನಾನು ಬಹಳ ಕುತೂಹಲ ಮತ್ತು ಆಸಕ್ತಿಯಿಂದ ಓದಿದ್ದೇನೆ. ಎಲ್ಲ ಸಂಚಿಕೆಗಳೂ ಇಷ್ಟವಾಗಿವೆ. ಒಂದರಲ್ಲಿ, `ಭಾರತದ ಆದಿವಾಸಿ ಕಥನ-ಅಸ್ಮಿತೆ ಮತ್ತು ಅಸಮಾನತೆ', ಮತ್ತೊಂದರಲ್ಲಿ, `ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಇಕಾಲಜಿ', ಇನ್ನೊಂದರಲ್ಲಿ `ಜಾಗತಿಕ ಪರಿಸರ ಚರಿತ್ರೆ' ವಿಷಯವನ್ನು ಕುರಿತು ಪ್ರಬುದ್ಧ ಲೇಖನಗಳ ಮೂಲಕ ಚರ್ಚಿಸಿದ್ದಾರೆ. ಕನ್ನಡಕ್ಕೆ ಹೊಸದೊಂದು ಪ್ರಕಾರದ ಪತ್ರಿಕೆಯನ್ನು ಕೊಡುತ್ತಿರುವ ಶ್ರೇಯಸ್ಸು ಮಾಧವ ಐತಾಳ್ ಮತ್ತು ಅವರೊಂದಿಗೆ ಕೈಜೋಡಿಸಿರುವ ಎಲ್ಲರಿಗೆ ಸಲ್ಲುತ್ತದೆ. ಅವರ ಪ್ರಯತ್ನವನ್ನು ನಾವು ಉಳಿಸಿಕೊಳ್ಳಬೇಕಿದೆ; ಅವರಿಗೆ ಬೆಂಬಲ ನೀಡಬೇಕಿದೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಹೊಂದಿರುವ ಮಾಧವ ಐತಾಳ್ ಅವರ ಪ್ರಯತ್ನಕ್ಕೆ ಶುಭ ಕೋರುತ್ತೇನೆ; ಅವರ ಯಶಸ್ಸನ್ನು ಬಯಸುತ್ತೇನೆ.
- ಡಾ. ನಾಗ ಎಚ್. ಹುಬ್ಳಿ
ಪ್ರಾಧ್ಯಾಪಕ, ರಾಂಚಿ, ಝಾರ್ಖಂಡ್